vachana; ಮಾನವೀಯ ಮೌಲ್ಯಗಳು ಕಳಚಿ ಹೋಗ್ತಾ ಇದೆ: ಶಿವಾಚಾರ್ಯ ಸ್ವಾಮಿಗಳು
ಧಾರವಾಡ, ಆ. 25: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ “ತುಮ್ಹಾರೆ ಸಿವಾ ಔರ್ ಕೋಯಿ ನಹೀ” ವಚನ (vachana) ಸಂಸ್ಕೃತಿ ಅಭಿಯಾನವನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿದರು.
ಈ ವೇಳೆ ಮಾತನಾಡಿ ಎಲ್ಲ ದಾನಗಳಿಗಿಂತ ಶ್ರೇಷ್ಠದಾನ ಸಮಯದಾನ. ಬಸವಣ್ಣನವರು ಕಾಲ, ಕಾಯಕ, ಕಾಸಿಗೆ ವಿಶೇಷ ಮನ್ನಣೆ ಕೊಟ್ಟರು. ಹಾಗಾಗಿ ಅಲ್ಪಅವಧಿಯಲ್ಲೇ ಅದ್ಭುತ ಸಾಧನೆಯನ್ನು ಅನುಭವ ಮಂಟಪದ ಮೂಲಕ ಕಲ್ಯಾಣದಲ್ಲಿ ಮಾಡಲಿಕ್ಕೆ ಸಾಧ್ಯವಾಯಿತು. ಬಸವಣ್ಣನವರು 12ನೆಯ ಶತಮಾನದಲ್ಲಿ ಸಾಧಿಸಿದ ಸಾಧನೆಯನ್ನು ಇವತ್ತಿಗೂ ನಾವು ಮಾಡಲಿಕ್ಕೆ ಆಗ್ತಾ ಇಲ್ಲ. ಮನುಕುಲ ದಿನದಿಂದ ದಿನಕ್ಕೆ ಉತ್ತಾನದ ಕಡೆಗೆ ಸಾಗುವ ಬದಲು ಅಧಃಪತನದ ಕಡೆ ಓಡ್ತಾ ಇದೆ. ಮಾನವೀಯ ಮೌಲ್ಯಗಳು ಕಳಚಿ ಹೋಗ್ತಾ ಇದೆ. ಇವತ್ತು ಬಹುತೇಕ ಸಂದರ್ಭಗಳಲ್ಲಿ ನಡೆಯೇ ಬೇರೆ ನುಡಿಯೇ ಬೇರೆ. ಮಾತು ಪುರಾತನರದು. ಕೃತಿ ಕಿರಾತನರದು. ಹೀಗಾದಾಗ ಬಸವ ತತ್ವಗಳಿಂದ, ಬಸವ ಸಂದೇಶಗಳಿಂದ ನಾವು ದೂರ ಸರಿತಾ ಇದ್ದೇವೆ. ಹಾಗಾಗಿ ಪ್ರಸ್ತುತ ದಿನಮಾನಗಳಲ್ಲಿ ಬಸವಣ್ಣನವರ ಸಂದೇಶ ಸಾಮಾನ್ಯರಿಂದ ಅಸಾಮಾನ್ಯರವರೆಗೆ, ಮನೆಯಿಂದ ಮಠದವರಿಗೆ, ಹಳ್ಳಿಯಿಂದ ದಿಲ್ಲಿಯವರೆಗೆ ಹೋಗುವ ಅಗತ್ಯ ಇದೆ ಎಂದು ಹೇಳಿದರು.
ಸಾಹಿತಿಗಳಾದ ವೀರಣ್ಣ ರಾಜೂರು ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಪೂಜ್ಯರು ಬಸವತತ್ವ ಮುಖ್ಯವಾಗಿರಿಸಿಕೊಂಡು ನಾಟಕದ ಮಾಧ್ಯಮದ ಮೂಲಕ ಜನರಿಗೆ ಮುಟ್ಟಿಸಬೇಕು ಎಂದು ಮಹಾಸಂಕಲ್ಪವನ್ನು ಮಾಡಿಕೊಂಡು ಶಿವಸಂಚಾರ ತಂಡವನ್ನು ಕಟ್ಟಿದರು. ಕ್ರಾಂತಿಯ ಮುಖ್ಯ ಉದ್ದೇಶ ಸತ್ಯ, ಶುದ್ಧ, ಸಾತ್ವಿಕ, ಸ್ವಾಭಿಮಾನದ ಬದುಕನ್ನು ನಡೆಸುವುದು. ಸರ್ವಸಮಾನತೆಯ ಸುಂದರ ಸ್ವಸ್ತ ಸಮಾಜವನ್ನು ನಿರ್ಮಿಸುವುದಾಗಿತ್ತು. ಅದಕ್ಕೆ ಮಾಧ್ಯಮವಾದದ್ದು ವಚನ. ವಚನಗಳ ಮೂಲಕ ಮೂಲಕ ಶರಣರು ಕೊಟ್ಟ ಸಂದೇಶಗಳು, ಮೌಲ್ಯಗಳು, ತತ್ವಗಳನ್ನು ತಿಳಿದುಕೊಳ್ಳಲಿಕ್ಕೆ ಪ್ರಯತ್ನ ಮಾಡ್ತಾನೇ ಇರುತ್ತೇವೆ. ಆ ಪ್ರಯತ್ನ ಬಹಳ ದೀರ್ಘಕಾಲ ನಡೆಯಬೇಕಾಗಿದೆ. ಪೂಜ್ಯರು ವಚನ ಧರ್ಮವನ್ನು ಜನಸಾಮಾನ್ಯರಿಗೆ ಮುಟ್ಟಿಸಬೇಕು ಎನ್ನುವ ಕಾರಣಕ್ಕಾಗಿ ನಾಟಕ, ನೃತ್ಯವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಈ ವಚನ ನೃತ್ಯವನ್ನು ಮೆಚ್ಚಿ ನಮ್ಮ ದೇಶದ ಪ್ರಧಾನಿ ಮೋದಿಯವರು ಪತ್ರವನ್ನು ಬರೆದಿದ್ದಾರೆ ಎಂದರು.
ಧಾರವಾಡದ ಪ್ರಭಾರೆ ಕುಲಪತಿಗಳಾದ ಬಸವನಗೌಡ ಮಾತನಾಡಿ ಬಸವಣ್ಣನವರು ನಡೆ ನುಡಿಗಳ ಮೂಲಕ ಶರಣ ಚಳವಳಿಗೆೆ ಹೊಸ ಅರ್ಥವನ್ನು ಕೊಟ್ಟರು. ಎಲ್ಲರನ್ನು ಒಪ್ಪಿಕೊಂಡು ಅಪ್ಪಿಕೊಂಡವರು. ವರ್ಗ, ವರ್ಣ, ಸಂಘರ್ಷದ ವಿರುದ್ಧ ಹೋರಾಡುತ್ತಾ ಸರ್ವರಿಗೂ ಸಮಬಾಳು ಸಮಪಾಲು ಎನ್ನುವ ಮೌಲ್ಯಗಳನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದರು. ಬಸವಣ್ಣನವರ 44 ವಚನಗಳು ನೃತ್ಯರೂಪಕದ ಮೂಲಕ ರಂಗದ ಮೇಲೆ ಪ್ರದರ್ಶನಗೊಳ್ಳುವುದು ತುಂಬಾ ಸಂತೋಷ. ಈ ಮೂಲಕ ಬಸವಣ್ಣನವರ ಸಮಾಜಮುಖಿ ಚಿಂತನೆಗಳು, ಸಂದೇಶಗಳು ಸರ್ವರ ಮನದಲ್ಲಿ ಮುಟ್ಟಲಿ ಎಂಬುದು ಪೂಜ್ಯರ ಆಶಯ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಕಲಪತಿಗಳಾದ ಪ್ರೊ. ಕೆ ಬಿ ಗುಡಸಿ ಮಾತನಾಡಿ ಈ ವಚನ ಸಾಹಿತ್ಯ ಎಂಬುದು ಜನವಾಣಿ. ಇದನ್ನು ಜೀವವಾಣಿಯನ್ನಾಗಿ ಪಂಡಿತಾರಾಧ್ಯ ಶ್ರೀಗಳು ಮಾಡಿಕೊಂಡಿದ್ದಾರೆ. ಶರಣರ ವಚನಗಳಲ್ಲಿ ವಿಜ್ಞಾನ, ವೈಜ್ಞಾನಿಕತೆಯನ್ನು ಹೊರ ತೆಗೆಯಲಿಕ್ಕೆ ಪ್ರಯತ್ನ ಮಾಡ್ತಾ ಇದಾರೆ. ವಚನ ಸಾಹಿತ್ಯ ಯಾವುದೇ ಒಂದು ಕಾಲ್ಪನಿಕ ಸಾಹಿತ್ಯವಲ್ಲ. ಅದು ಎಲ್ಲರ ಬಳಿ ಇರುವ ಸಾಹಿತ್ಯ. ವಚನ ಸಾಹಿತ್ಯವನ್ನು ನೃತ್ಯರೂಪಕದ ಮೂಲಕ ಶರಣರ ವಿಚಾರಗಳನ್ನು ಬಿತ್ತುವಂಥ ಕೆಲಸವನ್ನು ಪೂಜ್ಯ ಪಂಡಿತಾರಾಧ್ಯ ಶ್ರೀಗಳು ಮಾಡುತ್ತಿರುವುದು ತುಂಬಾ ಶ್ಲಾಘನೀಯ ಎಂದರು.
Outsource employee; ಹೊರಗುತ್ತಿಗೆ ನೌಕರರಿಗೆ ನೇರಪಾವತಿ ಪ್ರಸ್ತಾವನೆಗೆ ಸಚಿವರ ಸೂಚನೆ
ವೇದಿಕೆಯ ಮೇಲೆ ಮಲ್ಲಿಕಾರ್ಜುನ ಪಾಟೀಲ, ಎ ಬಿ ವೇದಮೂರ್ತಿ, ಕೆ ಎಂ ಅಂಗಡಿ, ಉಪಸ್ಥಿತರಿದ್ದರು. ಡಾ. ಸಿ ಎಂ ಕುಂದಗೋಳ ಸ್ವಾಗತಿಸಿದರೆ ಡಾ ಈರಣ್ಣ ಇಂಜನಗೇರಿ ನಿರೂಪಿಸಿ ವಂದಿಸಿದರು.