lorry; ಮಳೆ, ಬೆಳೆ ಕೊರತೆ, ಯಾರ್ಡ್ ಗಳಲ್ಲಿ ನಿಂತಲ್ಲೇ ನಿಂತ ಲಾರಿಗಳು..!
ದಾವಣಗೆರೆ, ಅ.18: ಒಂದು ಕಡೆ ಮಳೆ ಇಲ್ಲ, ಇನ್ನೊಂದು ಕಡೆ ರೈತರು ಹಾಕಿದ ಬಂಡವಾಳವೂ ಬರುತ್ತಿಲ್ಲ… ಇದು ಅನ್ನದಾತನ ಪರಿಸ್ಥಿತಿಯಾದರೆ, ಮತ್ತೊಂದೆಡೆ ರೈತರ ಮೇಲೆ ಅವಲಂಬಿತವಾಗಿರುವ ಲಾರಿ (lorry) ಮಾಲೀಕರ ಗೋಳು ಹೇಳತೀರದ್ದಾಗಿದೆ.
ಅರೆ..ಲಾರಿ ಮಾಲೀಕರಿಗೂ ರೈತರಿಗೂ ಏನು ಸಂಬಂಧ ಅಂತೀರಾ..ಇವರಿಬ್ಬರಿಗೂ ನೇರ ಸಂಬಂಧವಿದ್ದು, ಒಬ್ಬರೊನ್ನೊಬ್ಬರು ಬಿಟ್ಟು ಇನ್ನೊಬ್ಬರು ಇರೋದಿಲ್ಲ. ಹೇಳಿ ಕೇಳಿ ದಾವಣಗೆರೆ ಮೆಕ್ಕೆಜೋಳ ಕಣಜವಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಮೆಕ್ಕೆಜೋಳವನ್ನು ಇಲ್ಲಿ ಬೆಳೆಯುತ್ತಾರೆ..ಆದರೆ ಮಳೆ ಇಲ್ಲದ ಕಾರಣ ಮೆಕ್ಕೆಜೋಳ ಬೆಳೆ ಇಲ್ಲವಾಗಿದೆ. ಪರಿಣಾಮ ಲಾರಿ ಮಾಲೀಕರು ಸೇರಿದಂತೆ ಹಮಾಲಿಗಳು, ಡ್ರೈವರ್ ಗಳು, ಕ್ಲೀನರ್ ಗಳಿಗೆ ಕೆಲಸವಿಲ್ಲವಾಗಿದೆ. ಜತೆಗೆ ಲಾರಿಗಳನ್ನೇ ನಂಬಿರುವ ಟ್ರಾನ್ಸ್ಪೋರ್ಟ್, ಗ್ಯಾರೇಜ್ ಹೀಗೆ ಹತ್ತಾರು ಜನಕ್ಕೆ ಕೆಲಸವಿಲ್ಲವಾಗಿದೆ.
ದಾವಣಗೆರೆಯಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಲಾರಿಗಳು ಇದ್ದು, ಲೋಡ್ ಇಲ್ಲದೇ ನಿಂತಲ್ಲೇ ನಿಂತಿವೆ. ಪರಿಣಾಮ ಕೋಟ್ಯಂತರ ರೂಪಾಯಿ ವಹಿವಾಟು ನಿಂತಿದೆ.ಇನ್ನು ಸರಕಾರಕ್ಕೆ ಟ್ಯಾಕ್ಸ್ ಕಟ್ಟಬೇಕಾಗಿದೆ, ಸಂಸಾರ ನಡೆಸಬೇಕಿದೆ, ಸಾಲಗಾರರ ಕಾಟ ಹೆಚ್ಚಾಗಿದೆ. ಒಂದು ತಿಂಗಳು ಸಾಲ ಕಟ್ಟದೇ ಹೋದರೆ ಹಣ ನೀಡಿದ ವಸೂಲಿಗಾರರು ಲಾರಿಗಳನ್ನು ತೆಗೆದುಕೊಂಡು ಸ್ಟಾಕ್ಯಾರ್ಡ್ಗಳಲ್ಲಿ ನಿಲ್ಲಿಸಿಕೊಳ್ಳುತ್ತಿದ್ದಾರೆ. ಲಾರಿ ಇಲ್ಲದೇ ಹೋದರೆ ಸಾಲ ತೀರಿಸುವುದಾದರೂ ಹೇಗೆ ಎಂದು ಲಾರಿ ಮಾಲೀಕರು ಪ್ರಶ್ನೆ ಮಾಡುತ್ತಿದ್ದಾರೆ.
ಮಳೆ ಬಂದಿದ್ದರೇ ನಾವು ಚೆನ್ನಾಗಿ ಇರಬಹುದಿತ್ತು. ರೈತರು ಕೂಡ ಚೆನ್ನಾಗಿ ಇರಬಹುದಿತ್ತು. ಬರಗಾಲವಾದ ಕಾರಣ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ರೈತರಿಗೆ ಬರಪೀಡಿತ ಹಣ ಬರುತ್ತದೆ. ಮಹಿಳೆಯರಿಗೆ ಸರಕಾರ ಹಣ ನೀಡುತ್ತದೆ. ಎಲ್ಲರಿಗೂ ಎಲ್ಲ ಭಾಗ್ಯ ನೀಡಿರುವ ಸರಕಾರ ಲಾರಿ ಮಾಲೀಕರಿಗೂ ಅವರಿಗೆ ಉಪಯೋಗವಾಗುವ ಭಾಗ್ಯ ನೀಡಲಿ. ಡ್ರೈವರ್ ಗಳು ಅಥವಾ, ಕ್ಲೀನರ್ ಗಳಿಗಾದರೂ ಸರಕಾರ ಸಹಾಯ ಮಾಡಲಿ. ಈಗ ಎಲ್ಲ ದರಗಳು ಹೆಚ್ಚಾಗಿದೆ. ಕೆಲಸವಿಲ್ಲದ ಕಾರಣ ಜೀವನ ಬರ್ಬಾತ್ ಆಗಿದೆ. ಅದರಲ್ಲೂ ಆರೋಗ್ಯ ಸಮಸ್ಯೆ ಬಂದರೆ ನಾವು ಎಲ್ಲಿಂದ ಹಣ ತರಬೇಕು…ನಾವು ಇಲ್ಲ ಅಂದ್ರೆ ಯಾವ ಸ್ಟಾಕ್ ಕೂಡ ಬರೋದಿಲ್ಲ..ಇರೋದರಲ್ಲಿ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ಸರಕಾರ ನಮ್ಮತ್ತ ಕಣ್ಣಾಯಿಸಲಿ ಎಂದು ಲಾರಿ ಮಾಲೀಕರು ಎಂದು ಮನವಿ ಮಾಡಿದ್ದಾರೆ. ಒಟ್ಟಾರೆ ಲಾರಿ ಮಾಲೀಕರ ಸದ್ಯದ ಪರಿಸ್ಥಿತಿ ಹೇಳತೀರದ್ದಾಗಿದ್ದು, ಬರುವ ಸಂಕಷ್ಟಗಳನ್ನು ಮೆಟ್ಟಿ ಮುನ್ನಡೆಯುತ್ತಿದ್ದಾರೆ.