ಸುಳ್ಳು ಭರವಸೆ ನೀಡಿ ಕನಸಿನ ಲೋಕದಲ್ಲಿ ತೇಲಾಡುವಂತೆ ಮಾಡಿದ್ದಾರೆ: ಎಂ.ಪಿ.ಲತಾ
ಹರಪನಹಳ್ಳಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿರುವ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಜನರಿಗೆ ಸುಳ್ಳು ಭರವಸೆ ನೀಡಿ ಕನಸಿನ ಲೋಕದಲ್ಲಿ ತೇಲಾಡುವಂತೆ ಮಾಡಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ ಟೀಕಿಸಿದ್ದಾರೆ.
ರೈತರ ಆದಾಯ ದುಪ್ಪಟ್ಟು ಮಾಡಲು ಯಾವ ಕಾರ್ಯಕ್ರಮ ಬಜೆಟ್ ನಲ್ಲಿ ಇಲ್ಲ. ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚನೆ ಆಗುತ್ತೆ ಎಂದಿದ್ದರು. ಆದರೆ ಅದರ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪ ಇಲ್ಲ. ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳನ್ನೇ ಇನ್ನೂ ಅನುಷ್ಠಾನ ಮಾಡಿಲ್ಲ. ಇದೊಂದು ಗೊಂದಲಮಯ ಬಜೆಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಇದೊಂದು ನಿರಾಶಾದಾಯಕ, ಚುನಾವಣಾ ಬಜೆಟ್ ಆಗಿದೆ. ಬಡವರು ಉಪಯೋಗಿಸುವ ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಹೊಸತಾಗಿ ಹಾಕಿರುವುದರಿಂದ ಹೆಚ್ಚು ತೆರಿಗೆ ಸಂಗ್ರಹ ಆಗಿದೆ. ಆದರೆ ಇವೆಲ್ಲವೂ ಕೇಂದ್ರಕ್ಕೆ ಹೋಗುತ್ತದೆ, ಕರ್ನಾಟಕಕ್ಕೆ ಇದರ ಲಾಭ ಸಿಗುವುದಿಲ್ಲ. ಒಟ್ಟಾರೆಯಾಗಿ ಬಿಜೆಪಿ ಸರ್ಕಾರ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.