ಆದಿ ಕವಿ ಮಹರ್ಷಿ ವಾಲ್ಮೀಕಿ ಕುರಿತು ಸಂಶೋಧನೆ ಅಗತ್ಯ – ಡಾ. ಗಂಗಾಧರಯ್ಯ ಹಿರೇಮಠ

ದಾವಣಗೆರೆ: ಭಾರತದ ಭಾವೈಕ್ಯತೆಗೆ ಪುಷ್ಠಿ ನೀಡಿದ ವಾಲ್ಮೀಕಿಯ ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ಅದೆಷ್ಟೋ ರಾಮಾಯಣಗಳು ರಚನೆಯಾದವು ಎಂಬುದರ ಸ್ಪಷ್ಟತೆ ಅಸಾಧ್ಯ. ವಾಲ್ಮೀಕಿ ರಾಮಾಯಣ ರಾಮನ ನೈಜರೂಪ ಎಲ್ಲಿ ರಾಮನೋ ಅಲ್ಲಿ ವಾಲ್ಮೀಕಿಯೂ ಇರುತ್ತಾರೆ. ವಾಲ್ಮೀಕಿ ಮೇಲು-ಕೀಳೆನ್ನುವ ಭೇದಗಳಿಲ್ಲದೇ ಎಲ್ಲ ಸಮುದಾಯಕ್ಕೆ ಪ್ರಿಯವಾಗುವ ಮಹರ್ಷಿ ಯಾವುದೇ ರಾಜಾಶ್ರಯವನ್ನು ಬಯಸಿದವರಲ್ಲ. ಅವರ ಭಕ್ತಿಯೇ ಅವರ ಕಾವ್ಯಕ್ಕೆ ಶಕ್ತಿ ಹೇಳಬೇಕಾದದ್ದನ್ನು ಹೇಳುವ ಗುಣ ಆದಿ ಕವಿಯಲ್ಲಿತ್ತು. ಅವರ ನೋಟ ವಿಸ್ತಾರ. ರಾಮತಾರಕ ಮಂತ್ರ ಬೀಜವನ್ನು ಭಾರತೀಯರ ಹೃದಯಗಳಲ್ಲಿ ಭಿತ್ತಿ ಬೆಳೆಯುತ್ತಾ ದೇಶಾದ್ಯಂತ ಪರ್ಯಟನೆ ಮಾಡಿದ ಮಹಾನ್ ಪುರುಷ ವಾಲ್ಮೀಕಿ.

ನಾಡಿನಿಂದ ಕಾಡಿಗೆ ಹೋದ ಬೇಡರು:

ಕ್ಷತ್ರಿಯ ಕುಲಸ್ಥರು ನಾಡನ್ನು ತೊರೆದು ಕಾಡನ್ನು ಸೇರಿದ ಕಥೆಗಳು ಹಲವು. ಹೀಗೆ ನಾಡಿನಿಂದ ಕಾಡು ಸೇರಿದವರಲ್ಲಿ ವ್ಯಾಧರು ಅಥವಾ ಬೇಡ’ರಾದರು. ಅವರಲ್ಲಿ ಅತ್ಯಂತ ಶೂರ ಮತ್ತು ನಾಯಕತ್ವ ಗುಣಗಳನ್ನು ಹೊಂದಿದ್ದ ‘ಪ್ರಾಚೇತಸ’ ಪತ್ನಿ ಮಾನಿಷಾ ಇವರ ಸುಪುತ್ರನೇ ರತ್ನಾಕರ, ಅವನನ್ನು ‘ದುಂಡನೆಂದು ಕರೆಯುತ್ತಿದ್ದರು. ಇವರೇ ಮುಂದೇ ಜಗದ್ವಿಖ್ಯಾತಿ ಪಡೆದ ಕವಿ ವಾಲ್ಮೀಕಿ.

ರತ್ನಾಕರನ ಮನಃ ಪರಿವರ್ತನೆ:

ದೇಹಬಲ, ಸಮೂಹಬಲ, ಹಾಗೂ ಕ್ಷಾತ್ರ ಗುಣವುಳ್ಳ ರತ್ನಾಕರ ‘ಸನಾತನೆ’ಎಂಬ ಯುವತಿಯೊಂದಿಗೆ ವಿವಾಹವಾದ ಮಕ್ಕಳೂ ಆದವು ರತ್ನಾಕರ ಅಥವಾ ದುಂಡ ಕಾಡಿನಲ್ಲಿ ದಾರಿಹೋಕರ ಸುಲಿಗೆ ಮಾಡುತ್ತಿದ್ದನು ಎಂಬ ಸಂಗತಿಗೆ ಪೂರಕವಾಗಿ ಇತಿಹಾಸದಲ್ಲಿ ಹಲವು ದಂತ ಕಥೆಗಳಿವೆ. ಇತ್ತೀಚಿನ ಅಧ್ಯಯನಗಳು, ಸಂಶೋಧನೆಗಳು ವಾಲ್ಮೀಕಿ ಸುಲಿಗೆಕೋರ ಆಗಿರಲಿಲ್ಲ ಎಂಬ ಉಲ್ಲೇಖಗಳು ಲಭ್ಯವಾಗುತ್ತಿವೆ. ಒಟ್ಟಾರೆ ವಾಲ್ಮೀಕಿಯ ಜೀವನೋತಾಯ, ಬದುಕಿನ ಬಗ್ಗೆ ಇನ್ನುಷ್ಟು ಅಧ್ಯಯನ, ಸಂಶೋಧನೆಗಳು ನಡೆಯಬೇಕಾಗಿದೆ. ‘ಮರ ಮರ’ ಎಂಬ ಜಪದಿಂದ ರಾಮಾಯಣ ರಚಿಸಿದ ಎಂದು ಹೇಳುವುದು ಹಾಸ್ಯಾಸ್ಪದ. ಆಶ್ರಮದಲ್ಲಿ ವಾಲ್ಮೀಕಿಗಳಿಗೆ ಪ್ರತ್ಯಕ್ಷರಾದ ಬ್ರಹ್ಮಾದಿಗಳ ಪ್ರೇರಣೆ ಹಾಗೂ ‘ಮಾನಿಷಾದ’ ಶ್ಲೋಕವನ್ನು ನಾಂದಿಯಾಗಿ ಮಾಡಿಕೊಂಡು ಶ್ರೀರಾಮ ಚರಿತ್ರೆಯನ್ನು ರಚಿಸು ಎಂದು ವಾಲ್ಮೀಕಿಗೆ ಹುರಿದುಂಬಿಸಿದರು. ಅಲ್ಲದೆ ಬೇಡನೊಬ್ಬ ಕ್ರೌಂಚವಧೆಯ ಪ್ರಕರಣವನ್ನು ಗಮನಿಸಿದ ವಾಲ್ಮೀಕಿಯಲ್ಲಿ ಅನೇಕ ಪರಿವರ್ತನೆಗಳಾಗಿ ರಾಮಾಯಣವನ್ನು ಅನಾವರಣಗೊಳಿಸಿ ಮಹಾಕಾವ್ಯ ರಚನೆಗೆ ಮುನ್ನುಡಿ ದೊರಕಿತು.

ರಾಮಾಯಣ ಮಹಾಕಾವ್ಯ ರಚನೆ:

ವಾಲ್ಮೀಕಿಯು 24,000 ಶ್ಲೋಕಗಳಲ್ಲಿ ‘ಅನುಷ್ಟುಪ್ ಛಂದಸ್ಸಿನಲ್ಲಿ ಶ್ರೀರಾಮಾಯಣವನ್ನು ರಚಿಸಿದ್ದು. ಭಾರತೀಯರು ಹೆಮ್ಮೆಪಡುವ ಸಂಗತಿ. ಒಬ್ಬ ಸಾಮಾನ್ಯವ್ಯಕ್ತಿ ತನ್ನ ಜೀವನದಲ್ಲಿ ಪರಿವರ್ತನೆಗೊಂಡು ‘ಮಹಾಕಾವ್ಯ ರಚನೆ ಮಾಡಿದ್ದು ಒಂದು ಕಡೆಯಾದರು. ವ್ಯಕ್ತಿಗತ ವಾಲ್ಮೀಕಿಯ ಬದುಕು, ಸಾತ್ವಿಕತೆ, ಜ್ಞಾನ, ತಪಸ್ಸು, ಕುರಿತಾದ ಕಥೆಗಳು ನೂರಾರು. ವಾಲ್ಮೀಕಿಯ ಕಾಲದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಕ್ರಿ.ಪೂ. 3 ರಿಂದ 5ನೇ ಶತಮಾನದಲ್ಲಿ ವಾಲ್ಮೀಕಿ ಬದುಕಿದ್ದು ರಾಮಾಯಣ ರಚಿಸಿರಬೇಕು ಎಂಬ ನಿಲುವಿಗೆ ತಜ್ಞರು ಬಂದಿರುವುದು ಸ್ಪಷ್ಟವಾಗಿದೆ.

ಸೀತಾದೇವಿಯ ಉಪಚಾರಗೈದ ವಾಲ್ಮೀಕಿ:

ಶ್ರೀರಾಮನ ಆಜ್ಞೆಯಂತೆ ಸೀತೆ ಅಗ್ನಿ ಪ್ರವೇಶ ಮಾಡಿ ತನ್ನ ಪತಿವೃತ್ಯವನ್ನು ಋಜುವಾತು ಪಡಿಸಿದ್ದರೂ ದಂಪತಿಗಳು ಬಹುಕಾಲ ಸುಖದಿಂದ ಇರಲಾಗಲಿಲ್ಲ. ಅಗಸನೊಬ್ಬನ ಮಾತಿನಿಂದ ನೊಂದ ಶ್ರೀರಾಮ ಗರ್ಭವತಿಯಾಗಿದ್ದ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿಬಿಟ್ಟನು. ವಾಲ್ಮೀಕಿ ಸೀತೆಯನ್ನು ಸಂತಯಿಸಿ ತನ್ನ ಆಶ್ರಮಕ್ಕೆ ಕರೆತಂದು ಋಷಿಪತ್ನಿಯರ ಆರೈಕೆಗೆ ಒಪ್ಪಿಸಿದನು. ಸೀತೆಯು ಅವಳಿ ಪುತ್ರರಿಗೆ ಜನ್ಮವಿತ್ತಳು. ಅವರಿಗೆ ಲವ-ಕುಶರೆಂದು ನಾಮಕರಣವಾಯಿತು.

ಲವ-ಕುಶರಿಗೆ ವಿದ್ಯಾಗುರು ವಾಲ್ಮೀಕಿ:

ಸರ್ವಸ್ವವನ್ನು ರಾಮಾಯಣ ರಚನೆಗೆ ಧಾರೆ ಎರೆದಿದ್ದ ಪರಮ ನಿರ್ಲಪ್ತಯೋಗಿ ವಾಲ್ಮೀಕಿಗೆ ಲವ-ಕುಶರಿಗೆ ಅಕ್ಷರಭ್ಯಾಸ, ಉಪನಯನಾದಿ ಸಂಸ್ಕಾರಗಳನ್ನು ಕೊಟ್ಟು, ವೇದ ಕೃತಿಗಳನ್ನು ಬೋಧಿಸಿ, ಧನುರ್ವಿದ್ಯೆಯಲ್ಲಿ ಪಾರಂಗತರನ್ನುಗಿ ಮಾಡಿದನು. ರಾಮಕಥೆಯನ್ನು ಶ್ರೀರಾಮ ಪುತ್ರರಿಂದಲೇ ಓದಿಸಿ, ಹಾಡಿಸುವ ಸುದೀನವೂ ಬಂದಿತು. ಶ್ರೀರಾಮನಿಗೆ ಬಹುಕಾಲದ ನಂತರ ಲವ-ಕುಶರು ನಿನ್ನ ಮಕ್ಕಳೇ ಎಂದು ಪರಿಚಿಸಿದವರು ವಾಲ್ಮೀಕಿ, ಸೀತಾದೇವಿಯನ್ನು ಸುದೀರ್ಘಕಾಲ ಆರೈಕೆ ಮಾಡಿದ ತಂದೆ ಸ್ವರೂಪಿ ವಾಲ್ಮೀಕಿ. ಅಲ್ಲದೆ ಲವ-ಕುಶರಿಗೆ ವಿದ್ಯಾಭ್ಯಾಸ ಕಲಿಸದ ಗುರು ವಾಲ್ಮೀಕಿ, ಸೀತೆಯನ್ನು “ವಜ್ರಾದಪಿ ಕಡೋರಾನಿ ವೃದೊನಿ ಕುಸುಮಾದ” ಎಂಬಂತೆಯೇ ಚಿತ್ರಿಸಿದ್ದಾರೆ. ವಾಲ್ಮೀಕಿಯ ವ್ಯಕ್ತಿತ್ವ ಅನನ್ಯವಾದದ್ದು:

ಪರಿಶುದ್ಧ ಭಕ್ತಿ, ಮನುಷ್ಯನನ್ನು ಎಷ್ಟು ಉತ್ಕಟರಾಗಿ ಸಂಸ್ಕರಿಸಬಲ್ಲದು. ಕರ್ತವ್ಯ ಎಂಬ ಕಿರುಹಣತೆಯನ್ನು ಬೆಳಗಿಸಿಕೊಂಡು ಆದಿ ಕವಿ ರಾಮಾಯಣವೆಂಬ ಮಹಾಕಾವ್ಯವನ್ನು ರಚಿಸಿ, ರಾಮ ಸೀತೆಯರಷ್ಟೇ ಪೂಜ್ಯರಾಗಿ ಹೋದರು.

ಆದಿಕವಿಯ ವಿಶ್ಲೇಷಣಾ ಸಾಮರ್ಥ್ಯ, ನಿರೂಪಣೆಯಲ್ಲಿ ಆಯಾ ಪಾತ್ರದೊಂದಿಗೆ ಅವರ ತಾದಾತ್ಮ, ಗುಣಪಕ್ಷಪಾತ ಇವು ಅನನ್ಯವಾದದ್ದು. ಅಡವಿಯಲ್ಲಿ ಆಧ್ಯಾತ್ಮ ಮತ್ತು ಪ್ರಕೃತಿಗಳ ಮಿಲನ, ದುಷ್ಟರ ಮೇಲೆ ಶಿಷ್ಯರ ದಿಗ್ವಿಜಯಗಳು ಹೀಗೆ ಎಲ್ಲಾ ಪಾತ್ರಗಳು ಮತ್ತು ಸನ್ನಿವೇಶಗಳು ಕಟ್ಟಿಕೊಡುವುದು ಭಕ್ತಿ ಮತ್ತು ವಿಶ್ವಾಸಗಳಿಗೆ ಅಸಾಧ್ಯವಾಗಿರುವುದು ಯಾವುದು ಇಲ್ಲ ಎಂಬ ಸತ್ಯವನ್ನು ತಿಳಿಯ ಬಹುದಾಗಿದೆ. ಇದು ಯಾವುದೇ ಸ್ಥಿತಿಯಲ್ಲಿರುವ ವ್ಯಕ್ತಿಯಲ್ಲಾದರೂ ಬದುಕುಳಿಯುವ ಭರವಸೆ ಮೂಡಿಸುತ್ತದೆ. ಆದಿ ಕವಿ ಜಗತ್ತಿಗೆ ಒಳಿತನಲ್ಲದೆ ಬೇರೆ ಎನನ್ನೂ ಬಯಸಿಲ್ಲವಷ್ಟೇ ಎಂಬುದೇ ಸತ್ಯ ಸಂಗತಿಯಾಗಿದೆ.

ಲೋಕ ಸಂಚಾರಿಯಾದ ವಾಲ್ಮೀಕಿ:

ವಾಲ್ಮೀಕಿಯು ದೇಶಾದ್ಯಂತ ಸಂಚರಿಸಿದ್ದರೆಂಬ ಮಾಹಿತಿಗಳು ಲಭ್ಯವಾಗಿವೆ. ಅವರು ತಮ್ಮ ಸಹಚರಿ ‘ಸನಾತನಿ’ ಹಾಗೂ ಶಿಷ್ಯ ಗಣದೊಂದಿಗೆ ಪರ್ಯಟಿಸುತ್ತಾ ಕಾಶಿಯ ಗಂಗಾತೀರದಲ್ಲಿ ಅವರು ಪರ್ಣಕುಟಿರವೊಂದನ್ನು ನಿರ್ಮಿಸಿಕೊಂಡು ಅನೇಕ ದಿನಗಳನ್ನು ಕಳೆದದ್ದುಂಟು. ರಾಮಾಯಣವನ್ನು ‘ಗಾನ ಸುಧಾಮೃತವಾಗಿಸಿ’ ಜನರಿಗೆ ತಿಳಿಸುತ್ತಾ ಉಜ್ಜಯಿನಿಯಲ್ಲೂ ತಂಗಿದ್ದರು ಎಂಬುದಕ್ಕೆ ಪುರಾವೆಗಳು ದೊರಕಿವೆ. ರಾಮೇಶ್ವರ, ಚಿತ್ರದುರ್ಗದ ಪರಿಸರದಲ್ಲಿ ಹೀಗೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಮಹರ್ಷಿ ವಾಲ್ಮೀಕಿ ರಾಮಾಮೃತವನ್ನು ತನ್ನ ಅಕ್ಷಯ ಭಕ್ತಿ ಕಾವ್ಯ ಭಂಡಾರದಿಂದ ಹಂಚುತ್ತಾ ಬಂದಿರುವುದನ್ನು ಗಮನಿಸಬಹುದು.

ವಾಲ್ಮೀಕಿಯ ಐಕ್ಯ ವಲ್ಮೀಕದಲ್ಲಿ:

ಋಷಿಮುನಿಗಳ ಪ್ರೇರಣೆಯಿಂದ ಬದುಕಿನ ಜಂಜಾಟಗಳಿಗೆ ಮುಕ್ತಿಹೇಳಿ, ಏಕಾಗ್ರತೆ ಸಾಧನೆಗಾಗಿ ತಪಸ್ಸಿನಲ್ಲಿ ಕುಳಿತ ವಾಲ್ಮೀಕಿಯ ಸುತ್ತ ಹುತ್ತವೇ ಬೆಳೆದಿತ್ತು ಎಂಬ ಕಥೆ ನಮಗೆಲ್ಲಾ ತಿಳಿದಿದ್ದಾದರೂ, ವಾಲ್ಮೀಕಿಯ ಕೊನೆಯ ಐದು ವರ್ಷಗಳು ತಪಸ್ಸನ್ನಾಚರಿಸಿದ ಮಾಹಿತಿಯ ಕಥೆಗಳು ಲಭ್ಯವಾಗುತ್ತಿವೆ. ತಮ್ಮ ಗ್ರಂಥ ಸಂಪತ್ತನ್ನು ಭಾರಧ್ವಾಜ ಮುನಿಗಳಿಗೆ ಒಪ್ಪಿಸಿ ‘ಸೀತಾವನದಲ್ಲಿ ಏಕಾಂಗಿಯಾಗಲು ನಿರ್ಧರಿಸಿದರು. ತಪಸ್ಸು ಮಾಡಿ ‘ವಾಲ್ಮೀಕಿಯಾಗಿ ಘನಃ ವಲ್ಮೀಕದಲ್ಲಿಯೇ ಐಕ್ಯಗೊಂಡಿದ್ದು ಒಂದು ವಿಶೇಷವಾಗಿದೆ.

ವಾಲ್ಮೀಕಿ ರಾಮಾಯಣದ ಮಹತ್ವ:

ನಮ್ಮ ರಾಷ್ಟ್ರಕವಿ ಕುವೆಂಪುರವರ ‘ರಾಮಾಯಣ ದರ್ಶನಂ’ ಅವರನ್ನು ಆಧುನಿಕ ಕಾಲದ ವಾಲ್ಮೀಕಿಯಾಗಿಸಿದೆ. ರಾಮ, ರಾವಣ, ಸೀತಾ, ಊರ್ಮಿಳಾ ಎಲ್ಲಾ ಪತ್ರಗಳು ಅವರ ಸಮದರ್ಶನದಲ್ಲಿ
ಸಿಲುಕಿ ತಮ್ಮೆಲ್ಲಾ ದೌರ್ಬಲ್ಯಗಳಿಂದಾಚೆಗೆ ಮುಗಿಲೆತ್ತರ ಬೆಳೆದಿದೆ. ವಾಲ್ಮೀಕಿಯ ‘ರಾಮ’ ಕವಿಯ ಆರಾಧ್ಯ ದೈವವಾದರೆ, ಕುವೆಂಪುರವರ ‘ರಾಮ’ ವಿಶ್ವಮಾನವ. ವಾಲ್ಮೀಕಿ ರಾಮನನ್ನು ಹೊರ ಮತ್ತು ಒಳಗಣ್ಣುಗಳೆರಡದಿಂದಲೂ ಕಂಡಿದ್ದ ಭಾಗ್ಯಶಾಲಿಯಾದರೆ ಕುವೆಂಪು ರಾಮನನ್ನು ತಮ್ಮ ಅಂತಃ ಚಕ್ಷುಗಳಿಂದ ಕಂಡು ಚಿತ್ರಿಸಿದ್ದಾರೆ.

ಮಹಾತ್ಮಾಗಾಂಧೀಜಿಯವರ ಆಧ್ಯಾತ್ಮದ ಸಾರ-ಸರ್ವಸ್ವವು ರಾಮನೇ ಆಗಿದ್ದರು. ಅವರಿಗೆ ರಾಮ ಒಂದು ಕಾವ್ಯವೋ-ಪುರಾಣವೋ ಆಗಿರದೇ ಆತ್ಮಬಂಧು, ವೈದ್ಯ, ಮಾರ್ಗದರ್ಶಿ, ಎಲ್ಲವೂ ಆಗಿದ್ದನು.

ಒಟ್ಟಾರೆ ಇಂತಹ ಆದಿ ಕವಿ, ಮಹರ್ಷಿಯ ಕುರಿತಾಗಿ ನಾವು ನಮ್ಮ ವಿಶ್ವವಿದ್ಯಾನಿಲಯಗಳು ಅಧ್ಯಯನ ಮತ್ತು ಸಂಶೋಧನೆಗಳಿಗೆ ಮಹತ್ವ ನೀಡಿ. ವಾಲ್ಮೀಕಿಯ ನಿಜಜೀವನದ ಸ್ವರೂಪ, ಕಾಳಜಿ ಯನ್ನರಿತು ವಾಲ್ಮೀಕಿಯನ್ನು ದಂತ ಕಥೆಗಳಿಂದ ಮುಕ್ತಗೊಳಿಸಬೇಕಾಗಿದೆ. ವಾಲ್ಮೀಕಿಯ ವ್ಯಕ್ತಿತ್ವದ ಪರಿಚಯ ಮುಂದಿನ ಜನಾಂಗಕ್ಕೆ ವೈಜ್ಞಾನಿಕವಾಗಿ ಲಭ್ಯವಾಗಬೇಕಾಗಿದೆ. ಈ ದಿಶೆಯಲ್ಲಿ ನಾವೆಲ್ಲ ಚಿಂತನ-ಮಂಥನ ಮಾಡುವ ಸಂದರ್ಭ ಸಮಯೋಚಿತವಾಗಿದೆ ಎಂಬುದು ನನ್ನ ಆಶಯವಾಗಿದೆ.

ಡಾ. ಗಂಗಾಧರಯ್ಯ ಹಿರೇಮಠ, ಸಹ-ಪ್ರಾಧ್ಯಾಪಕರು, ದಾವಣಗೆರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!