Mock Test: ಮಂಗಳೂರು ಮಹಿಳೆಯ ದರೋಡೆ ಪ್ರಕರಣಕ್ಕೆ ಟ್ವಿಸ್ಟ್.! ಕಮಿಷನರ್ ಶಶಿಕುಮಾರ್ ವಿಡಿಯೋ ವೈರಲ್
ಮಂಗಳೂರು: ಬ್ಯಾಗನ್ನು ಕಸಿಯಲು ಬಂದವನಿಗೆ ಥಳಿಸಿ ಆತ ಅಲ್ಲಿಂದ ಕಾಲ್ಕೀಳುವಂತೆ ಮಾಡಿದ್ದ ಮಹಿಳೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಆಗಿತ್ತು. ಆದರೆ, ಈ ಘಟನೆ ಪೂರ್ವ ಯೋಜಿತವಾಗಿದ್ದು, ಇಂತಹ ಘಟನೆಗಳು ನಡೆದಾಗ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಲು ಮತ್ತು ಪೊಲೀಸ್ ಇಲಾಖಾ ಸಿಬ್ಬಂದಿ ಎಷ್ಟರ ಮಟ್ಟಿಗೆ ಇಂಥ ಹಠಾತ್ ಸಂದರ್ಭಗಳು ಎದುರಾದಲ್ಲಿ ಯಾವ ರೀತಿ ಸನ್ನದ್ಧರಾಗಿರುತ್ತಾರೆ ಎಂದು ಪರೀಕ್ಷಿಸಲು ಇಂತಹ ಪ್ರದರ್ಶನ ಮಾಡಲಾಗಿದೆ ಎಂದು ಮಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಶಶಿಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಸ್ವರಕ್ಷಣ ಮಹಿಳಾ ಟ್ರಸ್ಟ್ ನ ಶೋಭ ಲತಾ ಕಟೀಲ್ ಎಂಬ ಮಹಿಳೆಯನ್ನು ಈ ಪ್ರದರ್ಶನಕ್ಕೆ ಬಳಸಿಕೊಳ್ಳಲಾಯಿತು. ಮಹಿಳೆಯರು ಹೇಗೆ ತಮ್ಮನ್ನು ರಕ್ಷಿಸಿಕೊಳ್ಳಬಹುದು, ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಯಾವ ರೀತಿ ಇಂತಹ ಸಂದರ್ಭಗಳಲ್ಲಿ ಸಹಾಯಕ್ಕೆ ನಿಲ್ಲುತ್ತದೆ ಎಂಬುದನ್ನು ನೋಡುವುದಕ್ಕಾಗಿಯೇ ಈ ಪ್ರದರ್ಶನ ಮಾಡಲಾಯಿತು.
ಈ ಪ್ರದರ್ಶನದ ಬಗ್ಗೆ ಪೊಲೀಸ್ ಇಲಾಖೆಯ ಯಾವ ಸಿಬ್ಬಂದಿಗೂ ತಿಳಿಸಿರಲಿಲ್ಲ. ಅವರು ಕೂಡ ಸಾಕಷ್ಟು ತಯಾರಾಗಿಯೇ ಇಂತಹ ಸಂದರ್ಭಗಳನ್ನು ನಿಭಾಯಿಸುತ್ತಾರೆ ಎಂಬುದು ಬಹಿರಂಗವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.