Murram: ಅಕ್ರಮ ಮಣ್ಣು ಗಣಿಗಾರಿಕೆಗೆ ಕಡಿವಾಣ ಹಾಕಿ.! ಡಿ ಎಸ್ ಎಸ್ ಸಂಚಾಲಕ ಮಹಾಂತೇಶ್ ಆಗ್ರಹ

harihara murram bricks mafiya

ದಾವಣಗೆರೆ: (Murram) ಹರಿಹರ ತಾಲ್ಲೂಕಿನ ಹಲವೆಡೆ ಅಕ್ರಮ ಮಣ್ಣು ಗಣಿಗಾರಿಕೆ (ಮುರಂ ಖನಿಜ) ಅವ್ಯಾಹತವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆರೋಪಿಸಿದ್ದಾರೆ.

ಅಕ್ರಮ ಮಣ್ಣುಗಾರಿಕೆ ತಡೆಯಲು ಆಗ್ರಹಿಸಿ ಸಂಘಟನೆಯಿಂದ ಡಿ.4 ರಂದು ಹರಿಹರ ತಹಶೀಲ್ದಾರರಿಗೆ ಮನವಿ ನೀಡಲಾಗಿತ್ತು. ಆ ಮನವಿ ನೀಡಿದ ನಂತರ ಹಿಂದಿನ ದಿನಗಳಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಮಣ್ಣು ಸಾಗಾಣಿಕೆ ನಡೆಸಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸದ್ಯ ಹರಿಹರ ತಾಲ್ಲೂಕಿನ ಗುತ್ತೂರು, ಸಾರಥಿ, ಕುರುಬರಹಳ್ಳಿ, ಹರ್ಲಾಪುರ ಹಾಗೂ ಇತರೆ ಗ್ರಾಮಗಳ ಪಟ್ಟಾ ಭೂಮಿಯಲ್ಲಿ 100ಕ್ಕೂ ಹೆಚ್ಚು ಜೆಸಿಬಿ, ಇಟಾಚಿ, ಡೋಜರ್ ಯಂತ್ರಗಳು ದಿನದ 24 ಗಂಟೆ ಮಣ್ಣು ಅಗೆಯುತ್ತಿದ್ದರೆ, ನೂರಾರು 10 ವ್ಹೀಲ್ ಮಾನ್ ಕಂಪನಿ ಹಾಗೂ ಭಾರತ್ ಬೆಂಜ್ ಲಾರಿಗಳಲ್ಲಿ ಮಣ್ಣು ಸಾಗಾಣಿಕೆ ರಾಜಾರೋಷವಾಗಿ ನಡೆಯುತ್ತಿದೆ.

ಈಗಾಗಲೆ ಈ ಭಾಗದ ಪಟ್ಟಾ ಜಮೀನುಗಳಲ್ಲಿ 15 ರಿಂದ 25 ಅಡಿ ಆಳಕ್ಕೆ ತೋಡಿದ್ದು ಮತ್ತೆ ಮಣ್ಣು ತೋಡುವ ಕೆಲಸ ನಡೆಯುತ್ತಿದೆ. ಲಾರಿಗಳ ಸಂಚಾರದಿಂದ ಗುತ್ತೂರು, ಸಾರಥಿ, ಹರ್ಲಾಪುರದ ಜನತೆ ರಾತ್ರಿ ನಿದ್ದೆ ಮಾಡಲಾಗುತ್ತಿಲ್ಲ, ಲಾರಿಗಳ ಸಂಚಾರದಿಂದ ಏಳುತ್ತಿರುವ ಧೂಳು ಸಾವಿರಾರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಗ್ರಾಮಸ್ಥರೂ ಕೂಡ ಬೇಸತ್ತಿದ್ದು ಮಣ್ಣು ಮಾಫಿಯಾ ಲಾಬಿ ಮಾಡುವವರಿಂದ ಹೆದರಿ ಮೌನವಹಿಸಿದ್ದಾರೆ. ಈಗ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ಸಾವಿರಾರು ಎಕರೆ ಕೃಷಿ ಪಟ್ಟಾ ಜಮೀನು ದುರಸ್ತಿ ಮಾಡಲಾಗದ ದುಸ್ಥಿತಿಗೆ ತಲುಪುತ್ತಿದೆ. ಜಮೀನುಗಳ ರಕ್ಷಣೆಗೆ ಇರುವ ವಿವಿಧ ಇಲಾಖೆಯ ನಿಯಮ, ನಿಬಂಧನೆಗಳು ಪುಸ್ತಕಕ್ಕೆ ಸೀಮಿತವಾಗಿವೆ.

ಕೂಡಲೆ ಜಿಲ್ಲಾಧಿಕಾರಿಯವರು ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹಾಗೂ ಇದಕ್ಕೆ ಸಂಬಂಧಿಸಿದ ಇಲಾಖಾ ಮುಖ್ಯಸ್ಥರೊಂದಿಗೆ ನದಿ ದಡದ ಈ ಗ್ರಾಮಗಳಿಗೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!