Valmiki Reservation: “ನಾಟಕ ಬಿಟ್ಟು ಮೀಸಲಾತಿ ಕೊಡಿ” ಅಭಿಯಾನ.! ಶೇ.7.5 ಮೀಸಲಾತಿ ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಬೆಂಗಳೂರು: ಪರಿಶಿಷ್ಟ ವರ್ಗದ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡುವುದಾಗಿ ಭರವಸೆ ನೀಡಿ ಕೈ ಕೊಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ವಾಲ್ಮೀಕಿ ಸಮುದಾಯ ರೊಚ್ಚಿಗೆದ್ದಿದ್ದು, ನಾಟಕ ಬಿಟ್ಟು ಮೀಸಲಾತಿ ಕೊಡಿ ಎಂಬ ಅಭಿಯಾನ ಆರಂಭಿಸಿದೆ.
ಕರ್ನಾಟಕ ನಾಯಕರ ಒಕ್ಕೂಟದ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ಆರಂಭಿಸಲು ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು “ನಾಟಕ ಬಿಟ್ಟು ಮೀಸಲಾತಿ ಕೊಡಿ ಅಭಿಯಾನಕ್ಕೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಯುವ ಸಮುದಾಯ ಸಾಮಾಜಿಕ ಜಾಲ ತಾಣಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಶುರು ಹೊರಹಾಕುತ್ತಿದೆ.
ನವರಾತ್ರಿ ದಸರಾ ಶುಭಾಶಯ ಹೇಳುವಲ್ಲಿ ಕೂಡ ನಾಟಕ ಬಿಟ್ಟು ಮೀಸಲಾತಿ ಕೊಡಿ ಅಭಿಯಾನ ಆರಂಭಿಸಿರುವ ಸಮುದಾಯ, ಬಿಜೆಪಿ ಸರ್ಕಾರ ಕೇವಲ ನಮ್ಮನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಪರಿಶಿಷ್ಟ ವರ್ಗಕ್ಕೆ ಶೇ.7.5 ಹಾಗೂ ಪರಿಶಿಷ್ಟ ಜಾತಿಗೆ ಶೇ.15 ಮೀಸಲಾತಿ ನೀಡಲು ಶಿಫಾರಸು ಮಾಡಿದ ಬಳಿಕವೂ ಸರ್ಕಾರ ವರದಿ ಅನುಷ್ಟಾನಕ್ಕೆ ಮೀನಾಮೇಷ ಎಣಿಸಿ ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದಲ್ಲಿ ತ್ರಿ ಸದಸ್ಯ ಸಮಿತಿ ರಚನೆ ಮಾಡಿದೆ. ಒಬ್ಬ ನ್ಯಾಯಮೂರ್ತಿ ನೀಡಿದ ವರದಿಯನ್ನು ಪರಿಶೀಲನೆಗೆ ಮತ್ತೊಬ್ಬ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ನೀಡಿದ್ದು ಇತಿಹಾಸದಲ್ಲಿ ಇದೇ ಮೊದಲು. ಈ ಬಿಜೆಪಿ ಸರ್ಕಾರಕ್ಕೆ ಮೀಸಲಾತಿ ನೀಡುವ ಇಚ್ಚಾಶಕ್ತಿ ಇಲ್ಲ ಎಂದು ನಾಯಕರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಒಂದೇ ತಿಂಗಳಲ್ಲಿ ಮೀಸಲಾತಿ ಘೋಷಿಸುವುದಾಗಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವಚನ ನೀಡಿದರು. ಈಗ ವಚನ ಭ್ರಷ್ಟರಾಗಿ ಮನೆ ಸೇರಿದ್ದಾರೆ. ಈಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಅದೇ ರೀತಿ ಕಾಲಾಹರಣ ಮಾಡದೆ ಅ.20 ರೊಳಗೆ ಮೀಸಲಾತಿ ಘೋಷಿಸಿ ಬಿಜೆಪಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿ ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು ಎಚ್ಚರಿಸಿದ್ದಾರೆ.