ನೈತಿಕ ಪೊಲೀಸ್ ಗಿರಿಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು : ನೆರಳು ಬೀಡಿ ಕಾರ್ಮಿಕ ಯೂನಿಯನ್ ಪ್ರತಿಭಟನೆ

ದಾವಣಗೆರೆ: ನೈತಿಕ ಪೊಲೀಸ್‍ಗಿರಿ ಬೆಂಬಲಿಸುವಂತೆ ಕ್ರಿಯೆಗೆ ಪ್ರತಿಕ್ರಿಯೆ ಸಹಜ ಎನ್ನುವ ಹೇಳಿಕೆನ್ನು ಸಿಎಂ ಬೊಮ್ಮಾಯಿ ತಕ್ಷಣವೇ ಹಿಂಪಡೆಯಬೇಕು. ಅಲ್ಲದೇ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಇತರೆ ಸಂಘಟನೆಗಳ ಸಹಯೋಗದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಸಿಎಂ ಬೊಮ್ಮಾಯಿ ಹೇಳಿಕೆ ಖಂಡಿಸಿ, ನಾಡಿನ ಸಮಸ್ತ ಜನತೆ ಎದುರು ಬಹಿರಂಗ ಕ್ಷಮೆ ಯಾಚಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ನಂತರ ಉಪ ವಿಭಾಗಾಧಿಕಾರಿ ಕಚೇರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಪೀಪಲ್ಸ್, ಲಾಯರ್ಸ್ ಗಿಲ್ಡ್‍ನ ಹಿರಿಯ ವಕೀಲ ಅನೀಸ್ ಪಾಷಾ, ಮುಖ್ಯಮಂತ್ರಿಯಾಗಿ ಸಂವಿಧಾನಾತ್ಮಕವಾಗಿ ತೆಗೆದುಕೊಂಡ ಪ್ರಮಾಣ ವಚನದ ವಿರುದ್ಧ ಬಸವರಾಜ ಬೊಮ್ಮಾಯಿ ನೈತಿಕ ಪೊಲೀಸ್‍ಗಿರಿ ಬೆಂಬಲಿಸುವಂತಹ ಹೇಳಿಕೆ ನೀಡಿದ್ದಾರೆ.
ಇದು ರಾಜ್ಯದಲ್ಲಿ ಕೋಮು ಸೌಹಾರ್ದತೆ ಹಾಳುಗೆಡವಲು ಪ್ರೇರಣೆ ನೀಡುವಂತಿದೆ. ಮಂಗಳೂರಿನಲ್ಲಿ ನೈತಿಕ ಪೊಲೀಸ್‍ಗಿರಿಗೆ ಸಂಬಂಧಿಸಿದಂತೆ ಮತೀಯ ಗೂಂಡಾಗಾರಿ ಬೆಂಬಲಿಸುವಂತೆ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದು ಸರಿಯಲ್ಲ. ಕಾನೂನು ಪಾಲನೆ ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡಬೇಕಾದ್ದು ಸರ್ಕಾರದ ಆದ್ಯ ಕರ್ತವ್ಯ ಎಂದರು.
ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯದರ್ಶಿ ಎಂ.ಕರಿಬಸಪ್ಪ ಮಾತನಾಡಿ, ಸಂವಿಧಾನ ಎತ್ತಿ ಹಿಡಿಯುವುದಾಗಿ, ಧರ್ಮಜಾತಿ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ತಡೆಯಲು, ಅಂತಹ ಅಪರಾಧದಲ್ಲಿ ಭಾಗಿಯಾದವರ ಆರೋಪಿಗಳಿಗೆ ಶಿಕ್ಷಿಸಲು ಕ್ರಮ ಕೈಗೊಳ್ಳಬೇಕು. ಶಕ್ತಿ ವಾಹಿನಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿದ ನಿರ್ದೇಶನ ಪಾಲಿಸಬೇಕು. ಅಂತರ್ಜಾತಿ, ಅಂತರ ಧರ್ಮೀಯ ವಿವಾಹಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಪಾಲಿಸಬೇಕು ಎಂದು ಒತ್ತಾಯಿಸಿದರು.
ಅಂತರ್ಜಾತಿ, ಅಂತರ್ಧರ್ಮೀಯ ವಿವಾಹವಾದವರ ವಿರುದ್ಧ ನಡೆಯುವ ಹಿಂಸೆ, ಮರ್ಯಾದ ಹತ್ಯೆಗಳು, ನೈತಿಕ ಪೆÇಲೀಸ್ ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನೈತಿಕತೆ ಇಲ್ಲದೇ ಬದುಕುವುದಕ್ಕೆ ಸಾಧ್ಯವೂ ಇಲ್ಲ. ನಮ್ಮೆಲ್ಲರ ಸಂಬಂಧಗಳು ಮತ್ತು ಶಾಂತಿ, ಸುವ್ಯವಸ್ಥೆ ನಿಂತಿರುವುದು ನಮ್ಮ ನೈತಿಕತೆ ಮೇಲೆ. ನೈತಿಕ ಪೊಲೀಸ್‍ಗಿರಿ ಬೆಂಬಲಿಸುವ ಹೇಳಿಕೆ ನೀಡಿದ ಸಿಎಂ ನಾಡಿನ ಸಮಸ್ತ ಜನತೆಯಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು. ಈ ಬಗ್ಗೆ ಯಾವುದೇ ಉದಾಸೀನ ಬೇಡ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಡಿಎಸ್-4 ಜಿಲ್ಲಾ ಸಂಚಾಲಕ ಹೆಗ್ಗೆರೆ ರಂಗಪ್ಪ, ಸಿಐಟಿಯು ಮುಖಂಡ ಗುಡ್ಡಪ್ಪ, ತಿಮ್ಮಣ್ಣ, ನೆರಳು ಯೂನಿಯನ್‍ನ ಎಂ.ಕರಿಬಸಪ್ಪ, ಅಲ್ಪ ಸಂಖ್ಯಾತರ ಜಾಗೃತಿ ವೇದಿಕೆಯ ಅಬ್ದುಲ್ ಘನಿತಾಹೀರ್, ಅಣ್ಣಯ್ಯ, ನಿಜಾಮುದ್ದೀನ್, ಶಹಬಾಜ್, ನಸ್ರೀನ್ ಬಾನು, ಶಹೀನಾ, ನಸ್ರೀನ್, ಜಯಪ್ಪ, ಶಿರೀನ್ ಬಾನು, ಗುಲ್ಜಾರ್ ಬಾನು, ರುಕ್ಸಾನಾ ಬಾನು, ಹಸೀನಾ ಬಾನು, ನಾಜೀಮಾ ಬಾನು ಮತ್ತಿತರರು ಇದ್ದರು.