ಪೋಲಿಸ್ ಇಲ್ಲದಿದ್ದರೆ ನೆಮ್ಮದಿಯಿಂದ ಬದುಕಲು ಆಗುತ್ತಿರಲಿಲ್ಲ – ನ್ಯಾಯಾಧೀಶರಾದ ರಾಜೇಶ್ವರಿ ಎಸ್ ಹೆಗಡೆ ಮೆಚ್ಚುಗೆ

ದಾವಣಗೆರೆ: ಸೈನಿಕರು, ಪೊಲೀಸರು ಸಮರ್ಥವಾಗಿ ದೇಶ ಕಾಯುತ್ತಿರುವುದರಿಂದ ನಾವೆಲ್ಲರೂ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದೇವೆ. ಅವರು ಇಲ್ಲದೆ ಹೋಗಿದ್ದರೆ ನಾವು ನೆಮ್ಮದಿಯಿಂದ ಬದುಕಲು ಆಗುತ್ತಿರಲಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎಸ್. ಹೆಗಡೆ ಪೊಲೀಸರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪುಪ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸೈನಿಕರು ಮತ್ತು ಪೊಲೀಸರು ತಮ್ಮ ಕುಟುಂಬಗಳನ್ನು ತೊರೆದು ದೇಶಕ್ಕಾಗಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಹುತಾತ್ಮಾರನ್ನು ಪ್ರತಿಯೊಬ್ಬರು ಸ್ಮರಿಸಬೇಕಾಗಿದೆ ಎಂದರು.
ಪೊಲೀಸ್ ಹುತಾತ್ಮಾರ ದಿನಾಚರಣೆ ಕೇವಲ ಒಂದೇ ದಿನಕ್ಕೆ ಸೀಮಿತವಾಗಬಾರದು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ನಿರಂತರವಾಗಿ ಸ್ಮರಿಸುವಂತಾಗಬೇಕು. ಇತ್ತೀಚೆಗೆ ಕೇಂದ್ರ ಸಚಿವರೊಬ್ಬರು ದೇಶದ ಸಾವಿರ ಸ್ಕೂಲ್‌ಗಳಲ್ಲಿ ಸಾಧಕರ ಭಾವಚಿತ್ರ ಹಾಕುವ ಮೂಲಕ ಮಕ್ಕಳಲ್ಲಿ ಅವರ ಪರಿಚಯ ಮಾಡಿಕೊಡಲಾಗುವುದು ಎಂದು ಹೇಳಿರುವುದು ಸ್ವಾಗತರ್ಹವಾಗಿದೆ ಎಂದರು.
ಪ್ರಸ್ತುತ ದೇಶದ ಎಲ್ಲ ಶಾಲಾ, ಕಾಲೇಜುಗಳು, ದೊಡ್ಡ ದೊಡ್ಡ ಮಾಲ್‌ಗಳ ದೊಡ್ಡ ದ್ವಾರಗಳಲ್ಲಿ ದೇಶಕ್ಕಾಗಿ ಸೇವೆ ಮಾಡಿದ, ಪ್ರಾಣ ತ್ಯಾಗ ಮಾಡಿದ ಸಾಧಕರನ್ನು ಪರಿಚಯಿಸಿದರೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸ್ಪೂರ್ತಿಯಾಗಿ ದೇಶ ಸೇವೆ ಮಾಡಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಂವಿಧಾತ್ಮಕವಾಗಿ ನಾವು ಕೆಲಸ ಮಾಡಬೇಕಾಗಿದೆ ನಾವು ಹಕ್ಕುಗಳನ್ನು ಕೇಳುತ್ತೇವೆ. ಆದರೆ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ನಾವು ನಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸಿದರೆ, ಪೊಲೀಸರು ಕೂಡ ನೆಮ್ಮದಿಯಿಂದ ಜೀವನ ಮಾಡಬಹುದು ಎಂದರು.
ಬಿಸಿಲು, ಮಳೆ, ಎನ್ನದೆ ಕರ್ತವ್ಯನಿರ್ವಹಿಸುವ ಸಂಚಾರಿ ಪೊಲೀಸರಿಗೆ ಪ್ರತಿಯೊಬ್ಬರು ಅಭಿನಂದನೆ ಸಲ್ಲಿಸಬೇಕಾಗಿದೆ. ಅವರಿಗೆ ಸಂಚಾರಿ ನಿಯಮಗಳು ಅರಿವಿದ್ದರೂ ಅವುಗಳನ್ನು ಉಲ್ಲಂಘಿಸುವಂತಹ ಘಟನೆಗಳು ಪ್ರತಿನಿತ್ಯ ನಡೆಯುತ್ತವೆ. ಇದು ಆಗಬಾರದು. ಸಾರ್ವಜನಿಕರು ಶಿಸ್ತಿನ ನಡುವಳಿಕೆ ರೂಡಿಸಿಕೊಂಡರೆ ಪೊಲೀಸರು ಕೂಡ ನೆಮ್ಮದಿಯಿಂದ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.
ಪೂರ್ವವಲಯ ಐಜಿಪಿ ಎಸ್.ರವಿ ಮಾತನಾಡಿ ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ ಶಿಸ್ತು ನಮ್ಮ ಮುಖ್ಯ ಅಸ್ತ್ರ, ಬ್ರಹ್ಮಾಸ್ತ್ರ ಸಾವು-ನೋವು ಅನಿವಾರ್ಯ. ಆದರೆ ಅದು ನಮ್ಮ ಕೈಯಿಂದ ಆಗಬಾರದು. ಯಾವುದೇ ಸನ್ನಿವೇಶದಲ್ಲಿ ನಾವು ಶಿಸ್ತನ್ನು ಕೈಬಿಟ್ಟಾಗ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪೊಲೀಸ್ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.
ದಾವಣಗೆರೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಅರ್ಧಹೆಲ್ಮೆಟ್ ಹಾಕಿ ಬೈಕ್ ಓಡಿಸುತ್ತಾರೆ. ಅದು ಯಾವ ರೀತಿಯಲ್ಲೂ ರಕ್ಷಣೆ ಕೊಡುವ ಸಾಮಗ್ರಿಯಲ್ಲ. ಏಕೆ ಒಂದು ಹೆಣದ ಮೇಲೆ ಬುದ್ದಿ ಕಲಿಯಬೇಕಾ. ಒಬ್ಬ ಸತ್ತರನೇ ಪಾಠ ಕಲಿಯಬೇಕಾ. ಅದು ಆಗಬಾರದು. ಶಿಸ್ತಿನಿಂದ ನಾವು ರಸ್ತೆ ಮೇಲೆ ಬಂದಾಗ ನಮ್ಮ ಪ್ರಜ್ಞೆಯನ್ನು ಬಿಡ್ತಿವಿ, ಶಿಸ್ತನ್ನು ಬಲಿ ಕೊಡ್ತಿವಿ, ಅಲ್ಲಿ ನಾವು ಬಲಿಯಾಗುತ್ತೇವೆ. ಹೀಗಾಗಿ ನಾವು ಜಾಗೃತರಾಗುವ ಮೂಲಕ ಸಮಾಜ ಸುಭಿಕ್ಷವಾಗಿರಲು ತಮ್ಮ ಕರ್ತವ್ಯ ನಿರ್ವಹಿಸೋಣ ಎಂದು ಕರೆ ನೀಡಿದರು.
ಎಸ್.ಪಿ ಸಿ.ಬಿ ರಿಷ್ಯಂತ್ ನಾಮಸ್ಮರಣೆ ಮಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎಸ್ ಹೆಗಡೆ , ಐಜಿಪಿ ಎಸ್.ರವಿ, ಎಸ್.ಪಿ ರಿಷ್ಯಂತ್, ಹೆಚ್ಚುವರಿ ಎಸ್.ಪಿ ಎಂ.ರಾಜೀವ್ ಎಸಿಪಿ ಕನ್ನಿಕಾ, ಪಾಲಿಕೆ ಮೇಯರ್ ಎಸ್.ಟಿ.ವೀರೇಶ್, ಸಹಾಯಕ ಅಭಿಯೋಜಕರಾದ ಕಲ್ಪನಾ, ಆರ್‌ಟಿಓ ಶ್ರೀಧರ್ ಮಲ್ನಾಡ್, ಅಗ್ನಿ ಶಾಮಕ ದಳದ ಅಕಾರಿ ಬಸವಪ್ರಭು ಶರ್ಮಾ, ಮಹಿಳಾ ಮತ್ತು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ಡಿಹೆಚ್‌ಓ ಡಾ.ನಾಗರಾಜ್, ಸಿಪಿಐ ಬಸವರಾಜ್, ಜಿಲ್ಲಾ ವರದಿಗಾರರ ಕೂಟದ ಜಿ.ಎಂ ಆರಾಧ್ಯ ಸೇರಿದಂತೆ ಹಿರಿಯ ನಿವೃತ್ತ ಅಧಿಕಾರಿಗಳು ಹುತಾತ್ಮಾರಿಗೆ ಪುಪ್ಪ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮೂರು ಸುತ್ತು ಗುಂಡು ಹಾರಿಸಿದ ಬಳಿಕ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.