ದಾವಣಗೆರೆ: ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಿದ್ರೆ…ಅವರಿಗೆ ನನ್ನ ಬೆಂಬಲವಿದೆ..ಆದರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಹಣ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದ್ರೆ ಅವರ ಮೇಲೆ ಖಂಡಿತ ಕ್ರಮ ಕೈಗೊಳ್ಳುತ್ತೇನೆ ಎಂದು ನೂತನ ಎಸ್ಪಿ ಅಕ್ರಮದಲ್ಲಿ ಎಂಟ್ರಿಯಾಗುತ್ತಿರುವ ಖಾಕಿ ಪಡೆಗೆ ಖಡಕ್ ಸೂಚನೆ ನೀಡಿದರು.
ಸೋಮವಾರ ಜಿಲ್ಲಾ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ರಮ ಗಣಿಗಾರಿಕೆ, ಮರಳು ಮಾಫಿಯಾ, ಇಸ್ಪೀಟ್, ಜೂಜು ಸೇರಿದಂತೆ ಯಾವುದೇ ಬಗೆಯ ಕಾನೂನು ಬಾಹಿರ ಚಟುವಟಿಕೆಗಳ ಬೆಂಬಲಕ್ಕೆ ನಿಲ್ಲುವ ಪೊಲೀಸರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸುವುದಾಗಿ ನೂತನ ಎಸ್ಪಿ ಡಾ.ಕೆ.ಅರುಣ್ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೂ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ವಿಜಯನಗರ ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಸಂಪೂರ್ಣ ಹತೋಟಿಯಲ್ಲಿತ್ತು. ಇಲ್ಲೂ ಕೂಡ ಅದೇ ಮಾದರಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಇಲಾಖೆಯ ಸಿಬ್ಬಂದಿ ಸಹಕಾರ ನೀಡಿರುವುದು ಕಂಡು ಬಂದರೆ ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲಾಗುವುದು. ಕೆಲ ಸಿಬ್ಬಂದಿ ರಿಯಲ್ ಎಸ್ಟೇಟ್ ಮತ್ತು ಡಾಬಾ ವ್ಯವಹಾರ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದರು.
ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. 2014ರ ಐಪಿಎಸ್ ಬ್ಯಾಚ್‌ನವನಾಗಿದ್ದು, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದೇನೆ. ಈ ಭಾಗದ ಚಟುವಟಿಕೆಗಳ ಬಗ್ಗೆ ಮಾಹಿತಿ ಇದೆ. ಇದೀಗ ಇನ್ನಷ್ಟು ಮಾಹಿತಿ ಪಡೆಯಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕಾಗಿದೆ.
ಸದ್ಯ ಚುನಾವಣೆ ಹತ್ತಿರ ಇರುವುದರಿಂದ ಅದರ ಚಟುವಟಿಕೆಗಳ ಮೇಲೆ ಗಮನ ಹರಿಸಲಾಗಿದೆ.ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆಗಾಗಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈ ಗೊಳ್ಳಲಾಗಿದೆ ಎಂದು ಹೇಳಿದರು.
ಇನ್ನು ಭಾನುವಾರ ರಾತ್ರಿಯೇ ದಾವಣಗೆರೆಗೆ ಬಂದಿದ್ದ ನೂತನ ಎಸ್ಪಿ ಆಫೀಸರ್ ಕ್ಲಬ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ 10.30ಕ್ಕೆ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದರು. ಬಳಿಕ ಎಸ್ ಪಿ ಸಿ.ಬಿ.ರಿಷ್ಯಂತ್ ರಿಂದ ಅಧಿಕಾರ ಸ್ವೀಕರಿಸಿದರು. ಇದಾದ ನಂತರ ಐಜಿಪಿ ತ್ಯಾಗರಾಜನ್ ಬಳಿ ಸುಮಾರು ಅರ್ಧಗಂಟೆ ಕಾಲ ಚರ್ಚೆ ನಡೆಸಿದರು.
ಅಲ್ಲಿಂದ ದಾವಣಗೆರೆ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಮೀಟಿಂಗ್ ಮಾಡಿ ಕೆಲ ಸೂಚನೆಗಳನ್ನು ನೀಡಿದರು. ಈ ಹಿಂದೆ ವಿಜಯನಗರ ಜಿಲ್ಲೆಯ ರಕ್ಷಣಾಧಿಕಾರಿ ಯಾಗಿ ಸೇವೆ ಸಲ್ಲಿಸಿದ್ದ ಡಾ. ಅರುಣ್ ಅವರು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಆಗುವ ಮುನ್ನ ಕಲಬುರಗಿಯ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಒಟ್ಟಾರೆ ಸಿ.ಬಿ.ರಿಷ್ಯಂತ್ ಹಾಗೆ ಕೆಲಸ ಮಾಡುವ ಎಸ್ಪಿ ಡಾ.ಕೆ.ಅರುಣ್ ಆಗಿದ್ದು, ಮುಂದೆ ಹೇಗೆ ಕೆಲಸ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
