ಗ್ರಾಮಠಾಣ ಗಡಿ ಗುರುತಿಸಲು ನಿರ್ಲಕ್ಷ್ಯ ತೇಜಸ್ವಿ ನೇತೃತ್ವದಲ್ಲಿ ಪಾದಯಾತ್ರೆ-ಶಿರಮಗೊಂಡನಹಳ್ಳಿ ಬಳಿ ಪ್ರತಿಭಟನೆ
ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕಶೆಟ್ಟಿಹಳ್ಳಿ ಗ್ರಾಮಸ್ಥರು ಗ್ರಾಮಠಾಣಾ ಗಡಿ ಗುರುತಿಸಲು ಒತ್ತಾಯಿಸಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ನಗರದ ಹೊರವಲಯದಲ್ಲಿ ತಡೆಯಲಾಯಿತು.
ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಕಶೆಟ್ಟಿಹಳ್ಳಿಯಿಂದ ಪಾದಯಾತ್ರೆ ಆರಂಭವಾಗಿತ್ತು. ಯಾತ್ರೆ ನಡೆದ ಪರಿಣಾಮ ಶಿರಮಗೊಂಡನಹಳ್ಳಿ ಬಳಿಯೇ ಗ್ರಾಮಸ್ಥರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಹದಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪೊಲೀಸರು ಪ್ರತಿಭಟನಕಾರರನ್ನು ಎಬ್ಬಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪಕ್ಕದಲ್ಲೇ ಪ್ರತಿಭಟನಕಾರರು ಮೊಕ್ಕಾಂ ಹೂಡಿದರು. ಹಿರಿಯ ಅಧಿಕಾರಿಗಳು ಬಂದು ಬೇಡಿಕೆ ಈಡೇರಿಸಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿ ಪಟೇಲ್, ಕಶೆಟ್ಟಿಹಳ್ಳಿಯ 14 ಎಕರೆ ಗ್ರಾಮಠಾಣಾ ತೆರವುಗೊಳಿಸಿ ರೈತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗಿತ್ತು. ಈ ಮಧ್ಯೆ ಗ್ರಾಮದ ಕೆಲವರು ನ್ಯಾಯಾಲಯಕ್ಕೆ ಹೋಗಿ ಕಾರ್ಯಕ್ಕೆ ತಡೆಯೊಡ್ಡಿದರು. ಗಡಿ ಗುರುತಿಸುವಂತೆ ಸಂಬಂಧಪಟ್ಟ ಇಲಾಖೆಗೆ 7 ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಕಳೆದ ಡಿಸೆಂಬರ್ 31ರೊಳಗೆ ಗ್ರಾಮಠಾಣಾ ಗಡಿ ಗುರುತಿಸುವ ಕಾರ್ಯ ಮಾಡಿಕೊಡುವುದಾಗಿ ಭೂ ದಾಖಲೆಗಳ ಉಪ ನಿರ್ದೇಶಕರು ಭರವಸೆ ನೀಡಿದ್ದರು. ಆ ಭರವಸೆಯೂ ಈಡೇರಿಲ್ಲ. ಕೂಡಲೇ ಗ್ರಾಮಠಾಣಾ ಗಡಿ ಗುರುತಿಸಿಕೊಡಬೇಕು ಎಂದು ಆಗ್ರಹಿಸಿದರು.
7 ವರ್ಷಗಳಿಂದ ಗ್ರಾಮಠಾಣಾ ಗುರುತಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇಂದು ಪಾದಯಾತ್ರೆ ಕೈಗೊಂಡು 33 ಕಿ.ಮೀ. ನಡೆದು ಬಂದ ನಂತರ ಈಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿರುವುದು ದುರಂತದ ಸಂಗತಿ ಎಂದು ಕಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಹಾರುದ್ರಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿ ದುರ್ಗಾಶ್ರೀ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರ ಅಹವಾಲು ಆಲಿಸಿದರು. ಸಮಸ್ಯೆ ಪರಿಹರಿಸಲು ಮೇಲಧಿಕಾರಿಗಳ ಜತೆಗೆ ಮಾತನಾಡುವುದಾಗಿ ಭರವಸೆ ನೀಡಿದರಾದರೂ, ಪ್ರತಿಭಟನಾಕಾರರು ಸೊಪ್ಪು ಹಾಕಲಿಲ್ಲ.
ಕತ್ತಲಗೆರೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಹಾರುದ್ರಯ್ಯ, ಸದಸ್ಯರಾದ ಪಾರ್ವತಿಬಾಯಿ, ರಾಮಸ್ವಾಮಿ, ಗ್ರಾಮಸ್ಥರಾದ ಕೆ.ಟಿ. ಲೋಕಪ್ಪ, ತಿಪ್ಪಯ್ಯ, ಯುವ ಮುಖಂಡರಾದ ಜಿ. ಸುರೇಶ್, ಆರ್. ಶಿವು, ಕೆ.ಎಂ.ಮಂಜುನಾಥ, ವಿಶ್ವಾರಾದ್ಯ, ಜಗದೀಶ್, ಅಭಿಷೇಕ್, ತಿಪ್ಪೇಶ ನಾಯ್ಕ, ಲೋಕೇಶ್ ನಾಯ್ಕ, ಲೋಕಿಬಾಯಿ, ಬೇಬಿಬಾಯಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.