ಪುನೀತ್ ರಾಜ್ ಕುಮಾರ್ಗೆ ‘ಕರ್ನಾಟಕ ರತ್ನ’: ಅದ್ಧೂರಿ ಕಾರ್ಯಕ್ರಮಕ್ಕೆ ಸರ್ಕಾರದ ಚಿಂತನೆ
ಬೆಂಗಳೂರು: ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನವನ್ನು ಸರ್ಕಾರ ಘೋಷಿಸಿದೆ. ಅವರ ಕುಟುಂಬದವರ ಬಳಿ ಮಾತನಾಡಿ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ನಿಗದಿ ಮಾಡಲಾಗುವುದು. ಪುನೀತ್ ರಾಜ್‍ಕುಮಾರ್ ಅವರ ಪ್ರತಿಭೆ ಹಾಗೂ ಮಾನವೀಯ ಗುಣಗಳಿಗೆ ತಕ್ಕ ರೀತಿಯಲ್ಲಿ ಅರ್ಥಪೂರ್ಣವಾಗಿ ದೊಡ್ಡ ಪ್ರಮಾಣದಲ್ಲಿ ಕರ್ನಾಟಕ ರತ್ನ ನೀಡಲು ಚಿಂತನೆ ಮಾಡಿದ್ದು, ತಯಾರಿಯನ್ನೂ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಕಾಲವಾದ ಸಂದರ್ಭದಲ್ಲಿ ಕುಟುಂಬ ಅತ್ಯಂತ ಮುತ್ಸದಿತನದಿಂದ ನಡೆದುಕೊಂಡಿದೆ. ಇದನ್ನು ಎಂದಿಗೂ ಮರೆಯಲಾಗದು. ಕಷ್ಟದಲ್ಲಿ ಸಂಯಮವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಸಂತುಲನದ ಭಾವ, ಚಿಂತನೆ, ನಡವಳಿಕೆ ಬಹಳ ಮುಖ್ಯ. ಇದು ಅವರ ಕುಟುಂಬದವರು ಪ್ರಬುದ್ಧತೆಯನ್ನು ತೋರುತ್ತದೆ ಎಂದರು. ಪುನೀತ್ ರಾಜ್ ಕುಮಾರ್ ಅವರ ಜಾತ್ರೆ ನಿರಂತರವಾಗಿ ಸಾಗುತ್ತದೆ ಎಂದರು.
ಪುನೀತ್ ರಾಜ್‍ಕುಮಾರ್ ಕೇವಲ ಹೆಸರಾಗಿ ಉಳಿದಿಲ್ಲ. ಪ್ರತಿಯೊಬ್ಬ ಕನ್ನಡಿಗನ ಉಸಿರಾಗಿ ಉಳಿದಿದ್ದಾರೆ. ಒಬ್ಬ ಮನುಷ್ಯ ಹೇಗೆ ಬದುಕಿದ ಎನ್ನುವುದನ್ನು ಅವರು ಇಲ್ಲದೇ ಇರುವಾಗ ತಿಳಿಯುತ್ತದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ನಮ್ಮನ್ನು ನಗುನಗುತ್ತಲೇ ಬಿಟ್ಟುಹೋಗಿದ್ದಾರೆ. ಕನ್ನಡಿಗರ ಪ್ರತಿಯೊಂದು ಕುಟುಂಬದಲ್ಲಿ ತಮ್ಮ ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡ ಭಾವನೆ ಇಡೀ ಕರ್ನಾಟದಲ್ಲಿ ಆವರಿಸಿದೆ. ಯಾದಗಿರಿ, ಹಾವೇರಿ, ಮೈಸೂರು ಹೀಗೆ ಕರ್ನಾಟಕದ ಮೂಲೆ ಮೂಲೆಗೆ ಹೋದಲ್ಲಿ ಅವರ ಭಾವಚಿತ್ರಗಳನ್ನು ಪೂಜಿಸುವುದನ್ನು ನಾವು ಕಾಣುತ್ತೇವೆ ಎಂದರು.
ಅವರ ಸಮಾಧಿಗೆ ಇಂದಿಗೂ ಅವರ ಅಭಿಮಾನಿಗಳ ದಂಡು ಬರುವುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಎಷ್ಟು ಅದ್ಭುತವಾದ ಪ್ರೀತಿ ವಿಶ್ವಾಸವನ್ನು ಪುನೀತ್ ರಾಜ್‍ಕುಮಾರ್ ಗಳಿಸಿದ್ದರು ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಪುನೀತ್ ರಾಜ್‍ಕುಮಾರ್ ನಮ್ಮ ನಡುವೆ ಇದ್ದಾರೆ ಎಂಬ ಭಾವನೆಯಿಂದ ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಅವರನ್ನು ನಾವು ಕಳೆದುಕೊಂಡಿಲ್ಲ. ಆದರೆ ಅವರಿಂದ ಬಹಳಷ್ಟನ್ನು ಪಡೆದುಕೊಂಡಿದ್ದೇವೆ ಎಂದರು.
ಅವರ ನಗು ಕನ್ನಡಿಗರನ್ನಷ್ಟೇ ಅಲ್ಲ ಎಲ್ಲಾ ಭಾಷಿಕರನ್ನು ಆಕರ್ಷಸಿದೆ. ಅವರ ಆತ್ಮೀಯತೆ ಎಲ್ಲಾ ಬಾಷೆಯ ಮೇರು ನಟರನ್ನು ಸೆಳೆದಿದೆ. ಅವರ ಬಗ್ಗೆ ಅಭಿಮಾನದಿಂದ ಮಾತನಾಡಿದಾಗ ಅವರು ಗಳಿಸಿದ್ದ ಸ್ನೇಹ, ವಿಶ್ವಾಸವನ್ನು ತೋರಿಸುತ್ತದೆ.
ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ನಿರರ್ಗಳವಾಗಿ ಅಭಿನಯಿಸಬಲ್ಲವರಾಗಿದ್ದರು. ನನ್ನ ನಟನೆಗೆ ನಮ್ಮ ತಂದೆಯೇ ಕಾರಣ. ಪಾತ್ರದೊಳಗೆ ಹೋಗಿ ನಟನೆ ಮಾಡು. ತಂದೆ ಎದುರು ಮಾಡುತ್ತಿದ್ದೇನೆ ಎನ್ನುವ ಭಾವ ಇರಬಾರದು ಎಂದು ಅವರ ತಂದೆ ಹೇಳಿಕೊಟ್ಟಿದ್ದರು ಎಂದು ಪುನೀತ್ ತಿಳಿಸಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.
ಮೊದಲ ಚಿತ್ರದಿಂದ ಕೊನೆ ಚಿತ್ರದವರೆಗೂ ಪುನೀತ್ ಅವರ ನಟನೆಯಲ್ಲಿ ಮುಗ್ದತೆ ಉಳಿದುಕೊಂಡಿತ್ತು. ಮುಗ್ಧತೆ ದೇವರು ಕೊಡುವ ಕಾಣಿಕೆ. ಎಲ್ಲರಿಗೂ ಅದು ಬರುವುದಿಲ್ಲ. ಕೆಲವೇ ಕೆಲವರಿಗೆ ಅದನ್ನು ಕಾಪಾಡಿಕೊಂಡು ಹೋಗುವುದು ಬರುತ್ತದೆ. ಕನ್ನಡ ಚಿತ್ರರಂಗದಲ್ಲಿ ಮುಗ್ಧತೆಯನ್ನು ಕಾಪಾಡಿಕೊಂಡವರು ಡಾ: ರಾಜ್‍ಕುಮಾರ್ ಹಾಗೂ ಡಾ: ಪುನೀತ್ ರಾಜ್ ಕುಮಾರ್ ಇಬ್ಬರೇ ಎಂದರು.