ರೈಲ್ವೆ ಅಂಡರ್ ಪಾಸ್ ಸಾರ್ವಜನಿಕರು ಬೆಂಕಿಯಿಂದ ಬಾಣಲಿಗೆ – ಕೆ.ಎಲ್.ಹರೀಶ್ ಬಸಾಪುರ
ದಾವಣಗೆರೆ: ದಶಕಗಳಿಂದಲೂ ದಾವಣಗೆರೆಯ ಹೃದಯ ಭಾಗದಲ್ಲಿರುವ ಅಶೋಕ ಟಾಕೀಸ್ ಮುಂಭಾಗದ ರೈಲ್ವೆ ಗೇಟ್ ಸಮಸ್ಯೆಯಿಂದ ಸಾರ್ವಜನಿಕರು ರೋಸಿ ಹೋಗಿದ್ದರು ಆದರೆ ಈಗ ಸರ್ಕಾರ ಅಶೋಕ ಟಾಕೀಸ್ ಮುಂಭಾಗ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಮಾಡುತ್ತಿದ್ದು ಈ ನಿರ್ಮಾಣ ವ್ಯವಸ್ಥೆ ನೋಡಿದರೆ ಇದು ರೈಲ್ವೆ ಕೆಳ ಸೇತುವೆಯೋ??? ಅಥವಾ ಅಪಘಾತ ವಲಯಯೋ?? (ಆಕ್ಸಿಡೆಂಟ್ ಜೋನ್) ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ ಈಗ ಸಾರ್ವಜನಿಕರ ಸ್ಥಿತಿ ಬೆಂಕಿಯಿಂದ ಬಾಣಲಿಗೆ ಬೀಳುವಂತೆ ಆಗಿದೆ.
ಅಶೋಕ ಟಾಕೀಸ್ ಮುಂಭಾಗ ಅಂಡರ್ ಪಾಸ್ಗೆ ಸುಮಾರು 20 ಅಡಿ ರಸ್ತೆ ನಿರ್ಮಾಣ ಮಾಡುತ್ತಿದ್ದು, ರಸ್ತೆಯ ನಡುವೆ ಡಿವೈಡರ್ ಹಾಕುವ ಮೂಲಕ 10 ಅಡಿಯ ದ್ವಿಮುಖ ರಸ್ತೆ ನಿರ್ಮಾಣ ಮಾಡುತ್ತಿದ್ದು ನಂತರ ರೈಲ್ವೆ ಅಂಡರ್ ಬ್ರಿಡ್ಜ್ ಪಾಸಾದ ನಂತರ ಒಂದು ಮಾರ್ಗ ಈರುಳ್ಳಿ ಮಾರ್ಕೆಟ್ ಕಡೆಗೆ ಇನ್ನೊಂದು ಮಾರ್ಗ ಲಿಂಗೇಶ್ವರ ದೇವಸ್ಥಾನ ಮಾರ್ಗವಾಗಿ ಗಾಂಧಿ ಸರ್ಕಲ್ಲಿಗೆ ಹೋಗುತ್ತಿದ್ದು ಈ ರಸ್ತೆಗಳು ಕೇವಲ 10 ಅಡಿ ರಸ್ತೆಗಳಾಗಿದ್ದು ವಾಹನ ಸವಾರರು ಯಾವ ರೀತಿ ತಮ್ಮ ವಾಹನ ಚಲಾವಣೆ ಮಾಡಬೇಕು ಎಂಬುದರ ಬಗ್ಗೆ ತಯಾರಿ ತೆಗೆದುಕೊಳ್ಳಬೇಕಾಗಿದೆ.
ರೈಲ್ವೆ ಇಲಾಖೆ ಈ ಹಿಂದೆ ಡಿಸಿಎಂ ಬಳಿ ಬ್ರಿಡ್ಜ್ ನಿರ್ಮಿಸಿದಾಗಲೂ ಸಹ ಇಂತಹ ಎಡವಟ್ಟನ್ನೇ ಮಾಡಿ ಎರಡೆರಡು ಬಾರಿ ದುರಸ್ತಿ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿತ್ತು ಈಗ ಮತ್ತದೇ ರೀತಿಯ ಎಡವಟ್ಟನ್ನು ಅಶೋಕ ಟಾಕೀಸ್ ಮುಂಭಾಗದ ರೈಲ್ವೆ ಕೆಳ ಸೇತುವೆಯ ನಿರ್ಮಾಣದಲ್ಲಿ ಮಾಡುತ್ತಿದ್ದು ಇಂತಹ ಇಂಜಿನಿಯರ್ಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಯನಿರ್ವಹಿಸುವಾಗಲೇ ಸಿಗುತ್ತಾರೋ ಅಥವಾ ಇಲ್ಲಿ ಕರ್ತವ್ಯ ನಿರ್ವಹಿಸುವಾಗ ಹೀಗೆ ಆಗುತ್ತಾರೋ ಎಂದು ಸಾರ್ವಜನಿಕರು ಇಡಿ ಶಾಪ ಹಾಕುವಂತಾಗಿದೆ.
ರಾಜ್ಯ ಸರ್ಕಾರದ ಮೂಲಭೂತ ಸೌಲಭ್ಯ ಇಲಾಖೆಯ ಮೂಲಕ ಹಣ ಬಿಡುಗಡೆ ಮಾಡಿಸಿ ನಿರ್ಮಿಸಿದ್ದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯ ಫ್ಲೈ ಓವರ್ ಹಾಗೂ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಮೂಲಕ ಎಪಿಎಂಸಿ ಮಾರುಕಟ್ಟೆಯಲ್ಲಿ ನಿರ್ಮಿಸಿದ್ದ ಫ್ಲೈ ಓವರ್ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ರವರ ದೂರ ದೃಷ್ಟಿ ಹಾಗೂ ಸಾರ್ವಜನಿಕ ಸ್ನೇಹ ಯೋಜನೆಗಳಿಗೆ ಸಾಕ್ಷಿಯಾಗಿದ್ದು.
ದಶಕಗಳಿಂದ ಇರುವ ಸಮಸ್ಯೆಯನ್ನು ನಾವು ಸರಿ ಮಾಡಿದೆವು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಲು ಸಂಸದರು ಸಾರ್ವಜನಿಕರ ಜೀವವನ್ನು ಪಣವಿಡುತ್ತಿರುವುದು ಮಾತ್ರ ವಿಪರ್ಯಾಸ.