ಪೌರ ಕಾರ್ಮಿಕರ ನೇಮಕ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ದಾವಣಗೆರೆ : ದಾವಣಗೆರೆ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ಪೌರಕಾರ್ಮಿಕ ಹುದ್ದೆಯ ನೇಮಕಾತಿ ಪ್ರಕ್ರಿಯೆಯಡಿ ಆಯ್ಕೆಮಾಡಿ ತಾತ್ಕಾಲಿಕ ಪಟ್ಟಿಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಸ್ಥಳೀಯ ನಗರ ಸಂಸ್ಥೆಗಳ ಸೂಚನಾ ಫಲಕ ಹಾಗೂ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಾನಂದ ಕಾಪಶಿ ಅವರು ತಿಳಿಸಿದ್ದಾರೆ.
ದಾವಣಗೆರೆ ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ನೇರ ಪಾವತಿ, ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳಿಗೆ ವಿಶೇಷ ನೇಮಕಾತಿ ಅಡಿ ಅರ್ಜಿ ಆಹ್ವಾನಿಸಿ ಸ್ವೀಕೃತವಾದ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲನೆ ನಡೆಸಿ ನಿಯಮಾನುಸಾರ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಯ್ಕೆ ಪಟ್ಟಿ ಬಗ್ಗೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 01-03-2023ರೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಕಚೇರಿಗೆ ಸಲ್ಲಿಸಬಹುದಾಗಿದೆ.
http://davanagere.mrc.gov.in ತಾಣದಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.