ಎರಡು ದಿನಗಳಲ್ಲಿ ಆಶಾ ಕಾರ್ಯಕರ್ತೆಯರ ಬಾಕಿ ಪ್ರೋತ್ಸಾಹ ಧನ ಬಿಡುಗಡೆ; ಅಧಿಕಾರಿಗಳ ಭರವಸೆ

ಎರಡು ದಿನಗಳಲ್ಲಿ ಆಶಾ ಕಾರ್ಯಕರ್ತೆಯರ ಬಾಕಿ ಪ್ರೋತ್ಸಾಹ ಧನ ಬಿಡುಗಡೆ; ಅಧಿಕಾರಿಗಳ ಭರವಸೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ 4 ತಿಂಗಳ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಬಾಕಿ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. 4 ತಿಂಗಳ ಬಾಕಿ ಉಳಿದಿರುವ ಕೇಂದ್ರದ ಇನ್‌ಸೆಂಟಿವನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.
ಈ ಸಂಬಂಧ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಆಯುಕ್ತರನ್ನು ಭೇಟಿಯಾದ AIUTUC ನಿಯೋಗ, ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿತು.
ಆಶಾ ಕಾರ್ಯಕರ್ತೆಯರು ತಮ್ಮ ಮೂಲ ಕೆಲಸಗಳಾದ ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ-ಶಿಶು ಆರೈಕೆಗಳ ಕುರಿತ ಸೇವೆಗಳು, ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳ ಜೊತೆಗೆ ಕೊರೋನಾ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಗಟ್ಟುವಲ್ಲಿ ತಮ್ಮ ಜೀವದ ಹಂಗು ತೊರೆದು, ಕೊರೋನಾ ವಾರಿಯರ್ಸ್ ಆಗಿ ಪ್ರಮುಖ ಪಾತ್ರವಹಿಸಿದ್ದು ಈಗ ಇತಿಹಾಸ. ಕಳೆದ ನಾಲ್ಕು ತಿಂಗಳಿಂದ ಕೇಂದ್ರದ ಪ್ರೋತ್ಸಾಹಧನ ಬಿಡುಗಡೆಯಾಗದೆ ಆಶಾ ಕಾರ್ಯಕರ್ತೆಯರು ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಂಘಟನೆಯ ಪ್ರಮುಖರು ಆಯುಕ್ತರ ಗಮನಸೆಳೆದರು.
ಬಹುತೇಕ ‘ಆಶಾ’ಗಳು ಸಾಲ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ 3 ತಿಂಗಳ ನಿಗದಿತ ಗೌರವಧನ ಸಹ ಬಾಕಿ ಉಳಿದಿದ್ದಾಗ ನಗರದ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೆವು, ಆ ನಂತರ ಗೌರವಧನ ಬಿಡುಗಡೆಯಾಯಿತು. ಇದು BBMP ಗಮನದಲ್ಲಿ ಸಹ ಇದೆ. ಈಗ ಕೇಂದ್ರದ ಪ್ರೋತ್ಸಾಹಧನಕ್ಕೂ ಬೀದಿಗಿಳಿದು ಪ್ರತಿಭಟಿಸಬೇಕಾದ ಪರಿಸ್ಥಿತಿಯನ್ನು ಬಿಬಿಎಂಪಿ ಸೃಷ್ಟಿಸಿರುವುದು ಶೋಚನೀಯ ಎಂದು ಈ ಪ್ರಮುಖರು ಆಮಾಧಾನ ತೋಡಿಕೊಂಡರು.
ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ‘ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ’ದ ಜಿಲ್ಲಾ ಸಮಿತಿಯಿಂದ ಸಮಸ್ಯೆಗಳ ಪರಿಹಾರಕ್ಕೆ ಈ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ನೂರಾರು BBMP ಆಶಾ ಕಾರ್ಯಕರ್ತೆಯರು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ (ಬಿಬಿಎಂಪಿ) ತ್ರಿಲೋಕ ಚಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈಗಿನ ಬೆಲೆ ಏರಿಕೆಯ ದಿನಗಳಲ್ಲಿ ಅಲ್ಪಸ್ವಲ್ಪ ಬರುವ ಪ್ರೋತ್ಸಾಹ ಧನವನ್ನು ನಾಲ್ಕು ತಿಂಗಳು ಬಾಕಿ ಉಳಿಸಿಕೊಂಡರೆ ಆಶಾ ಕಾರ್ಯಕರ್ತೆಯರ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗುತ್ತದೆ. ಪ್ರೋತ್ಸಾಹ ಧನವನ್ನೇ ನಂಬಿಕೊಂಡು ಆಶಾ ಕಾರ್ಯಕರ್ತರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಎಂದು ‘ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ’ದ ರಾಜ್ಯ ಉಪಾಧ್ಯಕ್ಷರಾದ ರಮಾ ಟಿ.ಸಿ. ಅವರು ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ, ಪ್ರೋತ್ಸಾಹ ಧನವನ್ನು ಎರಡು ದಿನಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ತಲುಪುವ ರೀತಿ ಪ್ರಯತ್ನ ಮಾಡಲಾಗುವುದೆಂದು ತ್ರಿಲೋಕ ಚಂದ್ರ IAS ವಿಶೇಷ ಆಯುಕ್ತರು ತ್ರಿಲೋಕಚದ್ರ ಅವರು ಭರವಸೆ ನೀಡಿದರು.
ನಿಯೋಗದಲ್ಲಿ AIUTUC ಜಿಲ್ಲಾ ಕಾರ್ಯದರ್ಶಿಗಳಾದ ಜಿ ಹನುಮೇಶ್, BBMP ಆಶಾ ಸಂಘದ ನಾಯಕರಾದ ನಾಗಲಕ್ಷ್ಮಿ, ಫರಾನ, ಮಮತಾ, ಜಯಚಿತ್ರ, ರತ್ನ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಹಕ್ಕೊತ್ತಾಯಗಳು:

  • 4 ತಿಂಗಳ ಬಾಕಿ ಉಳಿದಿರುವ ಕೇಂದ್ರದ ಇನ್‌ಸೆಂಟಿವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು.

  • ಪ್ರತಿ ತಿಂಗಳು 5 ತಾರೀಖಿನೊಳಗೆ ರಾಜ್ಯದ ಗೌರವಧನ ಮತ್ತು ಕೇಂದ್ರದ ಪ್ರೋತ್ಸಾಹಧನ ಬಿಡುಗಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು

  • ರಾಜ್ಯ ಆರೋಗ್ಯ ಇಲಾಖೆಯ ಆದೇಶದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಆಶಾ ಕುಂದುಕೊರತೆಗಳ ಸಭೆಯನ್ನು ಹಮ್ಮಿಕೊಳ್ಳಬೇಕು.

Leave a Reply

Your email address will not be published. Required fields are marked *

error: Content is protected !!