ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದ ದೇವಾಲಯದ ಅವಶೇಷಗಳು ಪತ್ತೆ

ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದ ದೇವಾಲಯದ ಅವಶೇಷಗಳು ಪತ್ತೆ

ಹೊನ್ನಾಳಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರೆಬಿಳಚಿ ಗ್ರಾಮದಲ್ಲಿ ಹೊನ್ನಾಳಿಯ ಮೃತ್ಯುಂಜಯ  ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಹಾಗೂ ಪ್ರಾಂಶುಪಾಲ ಪ್ರವೀಣ ದೊಡ್ಡಗೌಡ ಅವರು ಶೋಧಕಾರ್ಯ ನಡೆಸಿದ ಸಂದರ್ಭದಲ್ಲಿ ರಾಷ್ಟ್ರಕೂಟರ ಕಾಲದ ಶೈವ ದೇವಾಲಯದ ಅವಶೇಷಗಳು ಪತ್ತೆಯಾಗಿವೆ.

ಅರೆಬಿಳಿಚಿಯಿಂದ ದಕ್ಷಿಣದ ಕಡೆಗೆ ಸುಮಾರು ಒಂದು ಕಿ.ಮೀ. ದೂರದಲ್ಲಿ ದೇವಾಲಯದ ಅವಶೇಷಗಳು ದೊರೆತಿವೆ. ಈ ಸ್ಥಳವು ವಡ್ಡರಹಟ್ಟಿ ಹೊಸಳ್ಳಿ ವಾಯವ್ಯ ಗಡಿಭಾಗದಲ್ಲಿರುವ ಜಮೀನಿನಲ್ಲಿದೆ. ಈ ಜಮೀನಿನ ಮಧ್ಯಭಾಗದಲ್ಲಿ 15 ಅಡಿ ಉದ್ದ 12 ಅಡಿ ಅಗಲ ಹಾಗೂ 5 ಅಡಿ ಎತ್ತರದ ದಿಬ್ಬ ಇದೆ. ಆ ದಿಬ್ಬದಲ್ಲಿ ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದ ದೇವಾಲಯದ ಅವಶೇಷಗಳು ಕಂಡುಬಂದಿವೆ.

ಇಟ್ಟಿಗೆ ತಳಪಾಯ: ಜಮೀನಿನ ಮಧ್ಯಭಾಗದಲ್ಲಿರುವ ದಿಬ್ಬದ ಸುತ್ತಲೂ ಎರಡು ಅಡಿ ಎತ್ತರದ ಇಟ್ಟಿಗೆಯಿಂದ ನಿರ್ಮಿಸಿದ ದೇವಾಲಯದ ತಳಪಾಯ ಕಂಡುಬರುತ್ತದೆ. ಪೂರ್ಣ ಪ್ರಮಾಣದಲ್ಲಿ ಸುಟ್ಟಿರುವ ಇಟ್ಟಿಗೆಗಳನ್ನು ಬಳಸಿ ದೇವಾಲಯದ ತಳಪಾಯವನ್ನು ನಿರ್ಮಿಸಲಾಗಿದೆ.

ಹಂಚಿನ ಅವಶೇಷಗಳು: ಜಮೀನಿನ ಮಧ್ಯಭಾಗದಲ್ಲಿರುವ ದಿಬ್ಬದ ಮೇಲ್ಭಾಗದ ಸುತ್ತಲೂ ಪ್ರಾರಂಭಿಕ ಮಧ್ಯಯುಗಕ್ಕೆ ಸಂಬಂಧಿಸಿದ ಹೆಂಚಿನ ಅವಶೇಷಗಳು ಹಾಗೂ ಮಡಿಕೆ ಚೂರುಗಳು ದೊರೆತಿವೆ. ಈ ಅವಶೇಷಗಳು 8ರಿಂದ 9ನೇ ಶತಮಾನಕ್ಕೆ ಸಂಬಂಧಿಸಿದವುಗಳಾಗಿವೆ. ಹೆಂಚು ಪೂರ್ಣ ಪ್ರಮಾಣದಲ್ಲಿ ಸುಡಲ್ಪಟ್ಟಿದ್ದು, ಅದರ ಬಣ್ಣವೂ ಕೈಗೆ ತಾಗುವುದಿಲ್ಲ ಎಂದು ಪ್ರವೀಣ ದೊಡ್ಡಗೌಡ ತಿಳಿಸಿದರು.

ಭಗ್ನಗೊಂಡ ನಂದಿಯ ಶಿಲ್ಪ: ದೇವಾಲಯದ ಅವಶೇಷಗಳಿರುವ ದಿಬ್ಬದ ಪೂರ್ವ ಭಾಗದಲ್ಲಿ ಭಗ್ನಗೊಂಡಿರುವ ನಂದಿಯ ಶಿಲ್ಪ ಕಂಡುಬರುತ್ತದೆ. ಈ ಶಿಲ್ಪವು ಎರಡು ಅಡಿ ಎತ್ತರವಾಗಿದ್ದು, ರುಂಡ ಭಾಗವು ಸಂಪೂರ್ಣ ಭಗ್ನಗೊಂಡಿದೆ. ನಂದಿಯ ಶಿಲ್ಪವು ಸರಳವಾಗಿ ಕೆತ್ತಲಾಗಿದೆ. ಈ ಶಿಲ್ಪವನ್ನು ನಿರ್ಮಿಸಲು ಗ್ರಾನೈಟ್‍ ಕಲ್ಲನ್ನು ಬಳಸಲಾಗಿದೆ. ರಾಷ್ಟ್ರಕೂಟರ ಕಾಲದಲ್ಲಿ ಗ್ರಾನೈಟ್ ಶಿಲೆಯನ್ನು ದೇವಾಲಯದ ನಿರ್ಮಾಣಕ್ಕೆ ಬಳಸಿರುವುದಕ್ಕೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಕುಡಿತಿನಿ, ಹಂಪಿ, ಸಿರಿವಾಳಗಳಲ್ಲಿ ರಾಷ್ಟ್ರಕೂಟರ ದೇವಾಲಯಗಳನ್ನು ಗ್ರಾನೈಟ್ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ.

ಕೋಣನತಲೆ: ದೇವಾಲಯದ ಅವಶೇಷಗಳಿರುವ ದಿಬ್ಬದ ಹಿಂಭಾಗದಲ್ಲಿ ಕೋಣನತಲೆಯ ಶಿಲ್ಪ ಕಂಡುಬರುತ್ತದೆ. ಈ ಶಿಲ್ಪ ಎರಡೂವರೆ ಅಡಿ ಉದ್ದ, ಒಂದೂವರೆ ಅಡಿ ಅಗಲ ಹೊಂದಿದೆ. ಕೋಣನ ಮುಖವನ್ನು ದಷ್ಟಪುಷ್ಟವಾಗಿ ಕೆತ್ತಲಾಗಿದೆ. ಕೋಣನ ಕಂಬಗಳು ಸಮಗಾತ್ರದಲ್ಲಿವೆ. ಕೋಣನ ತಲೆಯ ಕೆಳಭಾಗದಲ್ಲಿ ಕತ್ತಿಯನ್ನು ಹಿಡಿದಿರುವ ಶಿಲ್ಪಗಳ ಕೆತ್ತನೆಯನ್ನು ಮಾಡಲಾಗಿದೆ. ಕೋಣನ ತಲೆಯನ್ನು ದೇವಿಯ ಸಂಕೇತವಾಗಿ ಪೂಜಿಸಲಾಗುತ್ತದೆ.

ಈ ಮೇಲಿನ ಅವಶೇಷಗಳ ಆಧಾರದ ಮೇಲೆ ದಿಬ್ಬವಿರುವ ಸ್ಥಳದಲ್ಲಿ ದೇವಾಲಯ ನಿರ್ಮಾಣವಾಗಿತ್ತು ಎಂದು ಹೇಳಬಹುದು. ಈ ಪರಿಸರದಲ್ಲಿ ದೊರೆತಿರುವ ದೇವಾಲಯದ ಅವಶೇಷಗಳನ್ನು ಆಧರಿಸಿ ಇದೊಂದು ಶೈವ ದೇವಾಲಯವೆಂದು ಗುರುತಿಸಬಹುದು. ದಿಬ್ಬದಲ್ಲಿ ದೊರೆತಿರುವ ದೇವಾಲಯದ ಅವಶೇಷಗಳ ಲಕ್ಷಣಗಳನ್ನು ಆಧರಿಸಿ ಈ ದೇವಾಲಯವು 7ರಿಂದ 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ’ ಎಂದು ಡಾ.ಪ್ರವೀಣದೊಡ್ಡಗೌಡ ತಿಳಿಸಿದರು.

ಕ್ಷೇತ್ರ ಕಾರ್ಯದಲ್ಲಿ ವಿದ್ಯಾರ್ಥಿಗಳಾದ ಕಾರ್ತಿಕ್, ಕಿರಣ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!