ಮಾಹಿತಿ ಹಕ್ಕು ವೇದಿಕೆ ಕಾರ್ಯಕರ್ತರು ಭ್ರಷ್ಟರನ್ನು ಬಯಲಿಗೆಳೆಯುವ ಮೂಲಕ ಒಳ್ಳೆಯ ವ್ಯವಸ್ಥೆಗೆ ಕಾರಣರಾಗಬೇಕು – ಪತ್ರಕರ್ತ ಏಕಾಂತಪ್ಪ

ದಾವಣಗೆರೆ: ಭ್ರಷ್ಟಾಚಾರ ನಿರ್ಮೂಲನೆಗೆ ಮಾಹಿತಿ ಹಕ್ಕು ಕಾಯ್ದೆಯು ಬ್ರಹ್ಮಾಸ್ತ್ರದಂತಿದ್ದು, ಇದನ್ನು ಬಳಸಿಕೊಂಡು ಸ್ವಚ್ಛ ಸಮಾಜ ನಿರ್ಮಿಸಬೇಕಿದೆ ಎಂದು ಕರ್ನಾಟಕ ಮಾಹಿತಿ ಹಕ್ಕು ವೇದಿಕೆ ರಾಜ್ಯಾಧ್ಯಕ್ಷ ಹೇಮಂತ್ ನಾಗರಾಜ್ ತಿಳಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಭ್ರಷ್ಟಾಚಾರವು ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ಮೇಲ್ಮಟ್ಟದವರೆಗೂ ವ್ಯಾಪಿಸಿದೆ. ಕಾಮಗಾರಿಗಳ ಗುತ್ತಿಗೆದಾರರು ಕಮಿಷನ್ ನೀಡದ ಹೊರತು ಬಿಲ್ ಪಾಸ್ ಆಗುತ್ತಿಲ್ಲ. ಕಮಿಷನ್ ಕೊಟ್ಟು, ತನ್ನ ಲಾಭಾಂಶ ತೆಗೆದುಕೊಂಡು ಉಳಿದ ಹಣದಲ್ಲಿ ಮಾಡುವ ಕಾಮಗಾರಿ ಸಹಜವಾಗಿಯೇ ಕಳಪೆ ಮಟ್ಟದ್ದಾಗುತ್ತದೆ. ಈ ರೀತಿ ಸಾರ್ವಜನಿಕರ ಹಣ ದುರುಪಯೋಗ ಆಗುವುದನ್ನು ತಡೆಯಲು ಆರ್.ಟಿ.ಐ ಬಳಕೆಯಾಗಬೇಕು ಎಂದು ಅವರು ಆಶಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಅನಕ್ಷರಸ್ಥರನ್ನೇ ಅಧ್ಯಕ್ಷ ಸ್ಥಾನಕ್ಕೆ ಆರಿಸಲಾಗುತ್ತಿದೆ. ವಿದ್ಯಾವಂತರನ್ನು ಗ್ರಾಮಸಭೆಗಳಿಗೆ ಸೇರಿಸುತ್ತಿಲ್ಲ. ಜನರ ತೆರಿಗೆ ಹಣ ಸಮರ್ಪಕವಾಗಿ ಬಳಕೆಯಾಗುವಂತೆ ಪ್ರತಿಯೊಬ್ಬರೂ ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಸಾಮಾಜಿಕ ಕಳಕಳಿ, ಸಾರ್ವಜನಿಕ ಹಿತಾಸಕ್ತಿಯಿಂದ ಭ್ರಷ್ಟರ ವಿರುದ್ಧ ಹೋರಾಟ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಜನರ ತೆರಿಗೆ ಹಣದಲ್ಲಿ ಆಡಳಿತ ವ್ಯವಸ್ಥೆ ನಡೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ನಮ್ಮಿಂದ ಸರ್ಕಾರಿ ನೌಕರರ ಹೊಟ್ಟೆ ತುಂಬುತ್ತಿದೆ. ಆದರೆ ಜನರ ಹಣದಲ್ಲಿ ಬದುಕುವವರು ದಿನೇದಿನೇ ಶ್ರೀಮಂತರಾಗುತ್ತಿದ್ದರೆ, ಜನರು ಮಾತ್ರ ಬಡತನಕ್ಕೆ ನೂಕಲ್ಪಡುತ್ತಿದ್ದಾರೆ. ಈ ವ್ಯವಸ್ಥೆ ತೊಲಗಬೇಕಾದರೆ ಜನರು ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರು ಅನೇಕ ಕಡೆಗಳಿಂದ ಬೆದರಿಕೆ ಎದುರಿಸುತ್ತಿದ್ದು, ಅಂತಹವರಿಗೆ ರಕ್ಷಣೆ ಒದಗಿಸಬೇಕು. ಕಾಯ್ದೆ ದುರುಪಯೋಗಕ್ಕೂ ಕಡಿವಾಣ ಬೀಳಬೇಕು ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಆರ್.ಟಿ.ಐ. ಕಾರ್ಯಕರ್ತರ ಬಗ್ಗೆ ಸಾಕಷ್ಟು ತಪ್ಪು ಭಾವನೆ ಇದೆ. ಆದರೆ ಅಧಿಕಾರಿ, ನೌಕರರು ಪ್ರಾಮಾಣಿಕವಾಗಿದ್ದರೆ ಯಾರಿಗೂ ಭಯಪಡುವ ಅಗತ್ಯವಿಲ್ಲ. ಭ್ರಷ್ಟಾಚಾರ ಎಂಬುದು ವ್ಯವಸ್ಥೆಗೆ ಮಾರಕವಾಗಿದೆ. ಮಾಹಿತಿ ಹಕ್ಕು ವೇದಿಕೆ ಕಾರ್ಯಕರ್ತರು ಭ್ರಷ್ಟರನ್ನು ಬಯಲಿಗೆಳೆಯುವ ಮೂಲಕ ಒಳ್ಳೆಯ ವ್ಯವಸ್ಥೆಗೆ ಕಾರಣರಾಗಬೇಕು ಎಂದು ಆಶಿಸಿದರು.

ವೇದಿಕೆಯ ಧಾರವಾಡ ಘಟಕದ ಪ್ರಧಾನ ಕಾರ್ಯದರ್ಶಿ ಪರಶುರಾಮ ಬಗಲಿ ಮಾತನಾಡಿ, ರಾಜ್ಯದ ಪ್ರತಿಯೊಂದು ಸರ್ಕಾರಿ ಇಲಾಖೆಗಳಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇಂತಹ ವ್ಯವಸ್ಥೆಗೆ ಅಂತ್ಯ ಹಾಕಲು ಮಾಹಿತಿ ಹಕ್ಕು ಕಾಯ್ದೆಯನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಎಲ್ಲರೂ ಒಟ್ಟಾಗಿ ಸದೃಢವಾಗಿ ಕಾರ್ಯನಿರ್ವಹಿಸಬೇಕು ಎಂದರು.

ವೇದಿಕೆಯ ಜಿಲ್ಲಾಧ್ಯಕ್ಷ ಯು.ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ರಾಜ್ಯ ಸಮಿತಿ ಸದಸ್ಯ ಗುರುರಾಜ್, ರಾಜ್ಯ ಉಪಾಧ್ಯಕ್ಷ ಕೆ.ಟಿ.ಮಧು, ಪತ್ರಕರ್ತ ಹೆಚ್.ಎಂ.ಪಿ.ಕುಮಾರ್, ಜಗದೀಶ್ ಗೌಡ, ಮಂಜುನಾಥ್, ವಸಂತ್, ಮೂರ್ತೆಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಶ್ರೇಯಸ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!