ಸದಾಶಿವ ಆಯೋಗದ ವರದಿ ಪ್ರತಿಭಟನೆಗೆ ಹೊರಟಿದ್ದ ಬಸ್ ಅಪಘಾತ: ಇಬ್ಬರಿಗೆ ಗಂಭೀರ ಗಾಯ
ದಾವಣಗೆರೆ: ಬೆಳಗಾವಿ ಸುವರ್ಣಸೌಧ ಬಳಿ ಸದಾಶಿವ ಆಯೋಗ ವರದಿ ಜಾರಿಗೆ ಪ್ರತಿಭಟನೆಗೆ ಕರೆ ನೀಡಿ ಬೆಳಗಾವಿ ಹೊರಟ್ಟಿದ್ದ 15 ಜನರಿದ್ದ ಬಸ್ ಅಪಘಾತವಾಗಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ದಾವಣಗೆರೆ ನಗರದ ಶಿರಮಗೊಂಡನಹಳ್ಳಿ ರಸ್ತೆ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ.
ಲಾರಿ -ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಬಸ್ನಲ್ಲಿದ್ದ 15 ಮಂದಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಾದಿಗ ದಂಡೋರಾ ಜಾಗೃತಿ ಸಮಿತಿಯ ಬೆಂಗಳೂರು, ಚಿಕ್ಕಬಳ್ಳಾಪುರ, ಚಿಂತಾಮಣಿ ಸೇರಿದಂತೆ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಬೆಳಗಾವಿಗೆ ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಕರೆ ನೀಡಿದ್ದ ಸಭೆ ಮತ್ತು ಪ್ರತಿಭಟನೆಗೆ ತೆರಳುತ್ತಿದ್ದರು. ಮುಂಜಾನೆ ಸುಮಾರು 3 ಗಂಟೆಗೆ ಈ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಬಸ್ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾವಣಗೆರೆ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತಕೀಡಾದ ವ್ಯಕ್ತಿ ಎಂ.ಸಿ. ಶ್ರೀನಿವಾಸ್ ಈ ವೇಳೆ ಪ್ರತಿಕ್ರಿಯಿಸಿ, “ಬೆಳಗಾವಿ ಸುವರ್ಣಸೌಧದ ಬಳಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲು ಹೊರಟಿದ್ದೆವು. ಕೋಲಾರ ಚಿಕ್ಕಬಳ್ಳಾಪುರ, ಬೆಂಗಳೂರು ಸುತ್ತಮುತ್ತಲಿನಿಂದ ನಾಲ್ಕು ಬಸ್ಗಳ ಮೂಲಕ ಪ್ರತಿಭಟನೆಗಾಗಿ ಹೊರಟಿದ್ದೆವು. ನಮ್ಮ ಒಂದು ಬಸ್ ಹಾಗೂ ಲಾರಿ ನಡುವೆ ದಾವಣಗೆರೆ ಜಿಲ್ಲಾ ಪಂಚಾಯತ್ ಬಳಿ ಅಪಘಾತವಾಗಿದೆ. ಹದಿನೈದು ಜನರಿಗೆ ಗಾಯಗಳಾಗಿದೆ. ಬಸ್ ಚಾಲಕನಿಗೆ ಹೆಚ್ಚು ಪೆಟ್ಟು ಬಿದ್ದಿದೆ’ ಎಂದು ಅವರು ಘಟನೆ ಬಗ್ಗೆ ಮಾಹಿತಿ ನೀಡಿದರು.
ಸದಾಶಿವ ಆಯೋಗದ ವರದಿ ಜಾರಿಗೆ ಮಾಡುವಂತೆ ಹೋರಾಟ ಮಾಡುತ್ತಿದ್ದು, ಈ ವೇಳೆ ಬೆಳಗಾವಿ ಅಧಿವೇಶನದಲ್ಲಿ ಜಾರಿ ಮಾಡಿ ಕೇಂದ್ರಕ್ಕೆ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ಇದೇ ವೇಳೆ ಪ್ರತಿಭಟನೆಗೆ ಹೊರಟಿದ್ದ ಶ್ರೀನಿವಾಸ್ ಆಗ್ರಹಿಸಿದರು. ಸದಾಶಿವ ವರದಿ ಜಾರಿ ಮಾಡುವಂತೆ ಬಹಳ ದಿನಗಳಿಂದ ಹೋರಾಟ ಮಾಡಲಾಗುತ್ತಿದೆ. ಈ ವರದಿ ಸಲ್ಲಿಕೆಯಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ ವರದಿ ಮಾತ್ರ ಜಾರಿಯಾಗಿಲ್ಲ. ಈ ವರದಿ ಬಗ್ಗೆ ಪರ- ವಿರೋಧ ಚರ್ಚೆಗಳಿವೆ. ಹೀಗಾಗಿ ವರದಿ ಜಾರಿಗೆ ಸರ್ಕಾರಗಳು ಮೀನಮೇಷ ಎಣಿಸುತ್ತಿವೆ.