ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಷ್ಟಿತ ಶಾಲೆಗೆ ಪ್ರವೇಶ ನೀಡಿ : ನಿರಾಕರಣೆ ಮಾಡಿದವರ ವಿರುದ್ದ ಕ್ರಮ – ಎಂ ಶಿವಣ್ಣ
ದಾವಣಗೆರೆ: ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ನೀಡಬೇಕೆಂದು ಸರ್ಕಾರದ ಆದೇಶವಿದ್ದು, ಜಿಲ್ಲೆಗಳಲ್ಲಿ ಪ್ರತಿಷ್ಠಿತ ಶಾಲೆಗಳಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರವೇಶ ದೊರಕಿಸಿಕೊಡಲು ಜಿಲ್ಲಾಧಿಕಾರಿಗಳು ಗಮನಹರಿಸಬೇಕು. ಒಂದು ವೇಳೆ ಪ್ರವೇಶ ನೀಡದಿದ್ದರೆ ಅಂತಹ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013 ರ ಕಾಯ್ದೆ ಹಾಗೂ ನಿಯಮಗಳ ತರಬೇತಿ ಕಾರ್ಯಕ್ರಮದ ಬಳಿಕ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಗಳನ್ನು ಪಿಟ್‍ಗಳಲ್ಲಿ ಇಳಿಸುವ ಮುನ್ನ 42 ಪರಿಕರಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕಾಗಿದ್ದು, ಇದರಲ್ಲಿ ಯಾವುದೇ ಲೋಪದಿಂದ ಜೀವಹಾನಿ ಆದರೆ ಸಂಬಂಧಿಸಿದ ಕಂಟ್ರ್ಯಾಕ್ಟರ್ ಹಾಗೂ ಅನುಮತಿ ಪ್ರಾಧಿಕಾರದ ಅಧಿಕಾರಿ ನೇರ ಹೊಣೆಯಾಗುತ್ತಾರೆ. ಹಾಗಾಗಿ ಈ ಬಗೆಗೆ ಇರುವ ಕಾಯಿದೆಗಳನ್ನು ಪ್ರತಿಯೊಬ್ಬ ಅಧಿಕಾರಿಯೂ ತಿಳಿದು ಮನದಟ್ಟು ಮಾಡಿಕೊಳ್ಳಬೇಕು ಎಂದರು.
ಈ ಕುರಿತು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಹಲವಾರು ನಿರ್ದೇಶನ ನೀಡಿದ್ದು, ಈ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಯೋಗಕ್ಕೆ ನ್ಯಾಯಾಂಗದ ಅಧಿಕಾರವಿದ್ದು ಯಾವುದೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಬಹುದಾಗಿದೆ. ಹಾಗಾಗಿ ಎಲ್ಲರೂ ಕಾಯ್ದೆಯ ಬಗ್ಗೆ ಸಮರ್ಪಕವಾಗಿ ತಿಳಿದುಕೊಂಡು ಕಾರ್ಯನಿರ್ವಹಿಸಬೇಕೆಂದರು.
ಮೇಯರ್ ಎಸ್.ಟಿ.ವೀರೇಶ್ ಮಾತನಾಡಿ, ಈ ಬಾರಿಯ ಪಾಲಿಕೆ ಬಜೆಟ್‍ನಲ್ಲಿ 15 ಕಡೆ ವಿಶ್ರಾಂತಿ ಗೃಹ ಮಾಡಲು ಯೋಜನೆ ಸಿದ್ಧಪಡಿಸಿದ್ದು, ನಗರದ 45 ವಾರ್ಡ್‍ಗಳಲ್ಲೂ ಇಂತಹ ರೆಸ್ಟ್ ರೂಂಗಳನ್ನು ಮಾಡುವ ಯೋಜನೆಯಿದ್ದು, ಇವರುಗಳಿಗೆ ನಿರ್ವಹಣೆ ವಹಿಸಬಹುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ರೂಪ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮ, ಪಾಲಿಕೆ ಆಯಕ್ತ ವಿಶ್ವನಾಥ ಮುದಜ್ಜಿ, ವಿವಿಧ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇದ್ದರು.