ಯಾವ ಕಾರಣಕ್ಕೂ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ: ಯಡಿಯೂರಪ್ಪ

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಕುರಿತು ಸ್ಪೋಟಕ ಹೇಳಿಕೆ ಇದೀಗ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಮಾಜಿ ಸಚಿವ ಲಕ್ಷ್ಮಣ್ ಸವದಿ ಅವರ ಪುತ್ರನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ, ಬಿಎಸ್ ಯಡಿಯೂರಪ್ಪ ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ಅವರು ಕೇವಲ ನಾಟಕ ಮಾಡುತ್ತಿದ್ದಾರೆ ಎಂದು ಬಿಎಸ್‌ವೈ ಹೇಳಿದರು
ಅಸಲಿಗೆ ಸಿದ್ದರಾಮಯ್ಯ ಮೈಸೂರಿಗೆ ಬರಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ಕುರಿತು ನೇರವಾಗಿ ಹೇಳಿದರೆ ಪ್ರಯೋಜನವಾಗದು ಎಂದು ಅರಿತಿರುವ ಸಿದ್ದರಾಮಯ್ಯ, ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸುಮ್ಮನೆ ಹೇಳಿದ್ದಾರೆ. ಅವರು ಖಂಡಿತವಾಗಿಯೂ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಆದರೆ ಈ ಕುರಿತು ನಾನು ಖಚಿತ ಭವಿಷ್ಯ ನುಡಿಯಲಾರೆ ಎಂದು ಬಿಎಸ್‌ವೈ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸಲಿ ಅಥವಾ ಮೈಸೂರಿನಲ್ಲೇ ಸ್ಪರ್ಧಿಸಲಿ, ಅಥವಾ ಎರಡೂ ಕಡೆಯಿಂದಲೂ ಸ್ಪರ್ಧಿಸಲಿ. ನಾವು ಅವರನ್ನು ಸೋಲಿಸಲು ಬೇಕಾದ ಕಾರ್ಯತಂತ್ರವನ್ನು ಮಾಡುವುದು ನಿಶ್ಚಿತ. ಸಿದ್ದರಾಮಯ್ಯ ಈ ಬಾರಿ ಮನೆಗೆ ಹೋಗುವುದು ಶತಸಿದ್ಧ ಎಂದು ಬಿಎಸ್‌ವೈ ಖಡಕ್ ಆಗಿ ಹೇಳಿದ್ದಾರೆ.
ಸಿದ್ದರಾಮಯ್ಯ ಸ್ಪಷ್ಟನೆ: ಇತ್ತ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ನಾನು ಈ ಬಾರಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ಹೇಳಿದ್ದಾರೆ. ಕೋಲಾರ ಕ್ಷೇತ್ರ ನನ್ನ ಆಯ್ಕೆಯಾಗಿದ್ದು, ಈ ಕುರಿತು ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.