ಬಾಗಿಲು ಇಲ್ಲದ ಸರಕಾರಿ ಬಸ್‌ನಿಂದ ಮಹಿಳೆ ಬಿದ್ದು ಸಾವು.! ಕ್ರಮ ವಹಿಸದ ಕೆ ಎಸ್ ಆರ್ ಟಿ ಸಿ
ಹಳ್ಳಿ ಜನರಿಗೆ ಹಳೇ ಬಸ್, ಸಿಟಿ ಜನರಿಗೆ ಹೈಫೈ ಸರಕಾರಿ ಬಸ್ : ಎಲ್ಲಿದ್ದಾರೆ ಶ್ರೀ ರಾಮುಲು ?
ದಾವಣಗೆರೆ : ಒಂದಾನೊಂದು ಕಾಲದಲ್ಲಿ ಮಹಾತ್ಮ ಗಾಂಧೀಜಿ ಹಳ್ಳಿಗಳ ಅಭಿವೃದ್ಧಿಯಾದರೆ, ದೇಶ ಅಭಿವೃದ್ಧಿಯಾಗುತ್ತದೆ ಎಂದಿದ್ದರು..ಆದರೀಗ ಈಗಿನ ಸರಕಾರ ಹಳ್ಳಿ ಜನರನ್ನು ನಿರ್ಲಕ್ಷ್ಯ ಮಾಡಿರೋದಕ್ಕೆ ಪ್ರಕರಣವೊಂದು ಸಾಕ್ಷಿಯಾಗಿದೆ..
ದಾವಣಗೆರೆ ವಿವೇಕಾನಂದ ಬಡಾವಣೆ ಎರಡನೇ ಮುಖ್ಯ ರಸ್ತೆ ನಿವಾಸಿಯಾಗಿರುವ ಲಲಿತಮ್ಮ (52) ಎಂಬುವರು ವೈಯಕ್ತಿಕ ಕೆಲಸಕ್ಕೆ ಹೊಸದುರ್ಗಕ್ಕೆ ಹೋಗಿದ್ದ ವೇಳೆ ಡೋರ್ ಇಲ್ಲದ ಬಸ್ ನಿಂದ ಬಿದ್ದು ಸೋಮವಾರ ಮೃತಪಟ್ಟಿದ್ದಾರೆ. ಇದು ದಾವಣಗೆರೆ ಕೆಎಸ್ ಆರ್ ಟಿಸಿ ವಿಭಾಗದ ಆಡಳಿತಕ್ಕೆ ಸಾಕ್ಷಿಯಾಗಿದೆ.
ಮೃತ ಮಹಿಳೆ ಲಲಿತಮ್ಮ ಸಂಜೆ 4:30 ರಲ್ಲಿ ಹೊಸದುರ್ಗದಿಂದ ರಾಜ್ಯ ಸಾರಿಗೆ ಬಸ್ಸಿನಲ್ಲಿ ದಾವಣಗೆರೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ನಂತರ ಹೊಸದುರ್ಗದಲ್ಲಿ ತೆಂಗಿನಕಾಯಿಗಳನ್ನು ಕೊನೆ ಸೀಟಿನಲ್ಲಿ ಚೀಲಕ್ಕೆ ತುಂಬಿಕೊಂಡು ಬಸ್ಸಿನಲ್ಲಿ ತಂದಿದ್ದಾರೆ. ಎಚ್.ಬಸ್ಸಾಪುರ ಬಳಿ ಬಸ್ಸು ಹಾದು ಹೋಗುತ್ತಿರುವಾಗ ಲಲಿತಮ್ಮ ಹಿಂದಿನ ಸೀಟ್‌ನಲ್ಲಿ ಕಾಯಿ ನೋಡೋದಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಬಸ್ಸಿನ ಇಂದಿನ ಡೋರ್ ನಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಮಾಯಕೊಂಡ ಸಮೀಪ ಹಾದು ಹೋಗಿರುವ ಹೊಸದುರ್ಗ ದಾವಣಗೆರೆ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಆರು ಮೂವತ್ತರ ಸಮಯದಲ್ಲಿ ಈ ಘಟನೆ ನಡೆದಿದೆ. ಸಾರಿಗೆ ಬಸ್ ನ ಚಾಲಕ ಹಾಗೂ ನಿರ್ವಾಹಕರ ನಿರ್ಲಕ್ಷ ಈ ಸಾವಿಗೆ ಕಾರಣ ಎಂದು ನೆರೆದಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸರಿಯಾಗಿ ಮಳೆ, ಬೆಳೆ ಆಗದಿದ್ದರೆ ಜನರ ಹೊಟ್ಟೆಗೆ ಹಿಟ್ಟಿಲ್ಲದಿದ್ದರೇ, ಕುಡಿಯುವುದಕ್ಕೆ ನೀರಿಲ್ಲದಿದ್ದರೇ ನಾವು ಬರಗಾಲ ಬಂದಿದೆ ಎಂದು ಭಾವಿಸುತ್ತೇವೆ. ಆದರೆ ರಾಜ್ಯ ಸರಕಾರ ಎಲ್ಲವನ್ನೂ ಇಟ್ಟುಕೊಂಡು, ಪೆಟ್ರೋಲ್ ದರ ಹೆಚ್ಚಿಸಿದಾಗೊಮ್ಮೆ ಬಸ್ ದರ ಹೆಚ್ಚಿಸುತ್ತಿದೆ. ಈ ನಡುವೆ ಕೆಲ ಹಳ್ಳಿಗಳಿಗೆ ಬಸ್ ಹೋಗೋದೆ ಇಲ್ಲ. ಹಳ್ಳಿಗಳಿಗೆ ಹೋಗುವ ಬಸ್‌ನಲ್ಲಿ ಕುಳಿತರೆ ಸಾಕು ಗಾಳಿ ಬೇಡವೆಂದರೆ ಬರುತ್ತದೆ….ಬಾಗಿಲುಗಳು ಇರೋದೆ ಇಲ್ಲ.. ಬಾಗಿಲು ಇಲ್ಲದ ಹಳೆ ಡಕೋಟ ಬಸ್‌ಗಳು ಸಂಚಾರ ಮಾಡುತ್ತದೆ. ಸಿಟಿ ಜನರಿಗೆ ಮಾತ್ರ ಬಾಗಿಲು ಇರುವ ಹೈಫೈ ಬಸ್‌ಗಳು..ಇನ್ನು ಹಳ್ಳಿ ಕಡೆ ಹೋದರೆ ಕಲೆಕ್ಷನ್ ಡೌನ್, ಪಾಸ್ ಪಡೆಯುವ ವಿದ್ಯಾರ್ಥಿಗಳು ಹೆಚ್ಚು ಹತ್ತುತ್ತಾರೆ..ಇದರಿಂದ ವಹಿವಾಟು ಆಗೋದಿಲ್ಲ ಎಂಬುದು ಕೆಎಸ್‌ಆರ್‌ಟಿಸಿ ವಾದ.
ತಾಲೂಕಿನ ಯಾವುದೇ ಹಳ್ಳಿಯ ಬಸ್‌ಗಳನ್ನು ನೋಡಿದರೂ ಹರಕು-ಮುರುಕು ಸ್ಥಿತಿಯಲ್ಲಿವೆ. ಇವುಗಳಲ್ಲಿ ಪ್ರಯಾಣಿಸುವ ಜನರು ತಮ್ಮ ಜೀವ ಭಯದಲ್ಲಿ ಪಯಣ ಸಾಗಿಸುತ್ತಾರೆ. ಮಾಯಕೊಂಡ, ಚನ್ನಗಿರಿ ಹಳ್ಳಿಗಳಿಗೆ ಸಂಚರಿಸುವ ಸಾರಿಗೆ ಬಸ್‌ಗಳು ಸಂಚಾರಕ್ಕೆ ಯೋಗ್ಯವಲ್ಲದವುಗಳನ್ನು ಸಾರಿಗೆ ವ್ಯವಸ್ಥಾಪಕರು ಓಡಿಸುತ್ತಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂಬುವುದು ಹಳ್ಳಿಗರ ಆರೋಪ.
ಈ ಬಸ್‌ಗಳ ಸುತ್ತಲೂ ಗ್ಲಾಸ್‌ಗಳು ಇರೋದಿಲ್ಲ. ಕೆಲವು ಬಸ್‌ಗಳಿಗೆ ಬಾಗಿಲೇ ಇಲ್ಲ, ಕೆಲವು ಬಸ್‌ಗಳು ಹೊರಗಿನಿಂದ ಅಂದವಾಗಿ ಕಂಡರೂ ಒಳಗಡೆ ಮಾತ್ರ ಸೀಟುಗಳೇ ಇರುವುದಿಲ್ಲ, ಇದ್ದ ಹರಕು -ಮುರುಕು ಸೀಟುಗಳ ಮೇಲೆ ಕುಳಿತು ಪ್ರಯಾಣಿಸಬೇಕಿದೆ. ಅವುಗಳು ಸಹ ನಿರ್ವಾಹಕರ ನಿರ್ಲಕ್ಷ್ಯದಿಂದ ಹಾಳಾಗಿ ಅಂದ ಗೆಟ್ಟಿವೆ.
ಮಳೆಗಾಲದಲ್ಲಂತೂ ಸಾರಿಗೆ ಬಸ್‌ನಲ್ಲಿ ಸಂಚರಿಸುವುದಕ್ಕಿಂತ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಸಮಯಕ್ಕೆ ಸರಿಯಾಗಿ ಬಸ್ಗಳು ಬರುತ್ತಿಲ್ಲ, ಶಾಲಾ ದಿನಗಳಲ್ಲಿ ಶಾಲೆ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ತಡವಾಗಿ ಬರುವ ಬಸ್‌ಗಳಿಗಾಗಿ ಕಾದು ಕುಳಿತು ಕೊಳ್ಳಬೇಕು. ಡಕೋಟಾ ಬಸ್ ಬಿಡುತ್ತಿದ್ದರಿಂದ ಬಸ್ ನಡು ರಸ್ತೆಯಲ್ಲಿ ಕೈ ಕೊಟ್ಟರೆ ಅಂದು ಶಾಲೆಗಳಿಗೆ ಹೋಗುವುದು ಸಾಧ್ಯವಾಗುವುದಿಲ್ಲ. ಇನ್ನಾದರೂ ಕೆಎಸ್‌ಆರ್‌ಟಿಸಿ ಡಿಸಿ ಇತ್ತ ಗಮನಹರಿಸಿ ಹಳ್ಳಿಗಳಿಗೆ ಡೋರ್ ಇರುವ ಬಸ್‌ನ್ನಾದರೂ ಬಿಡುತ್ತಾರಾ ಎಂದು ಕಾದುನೋಡಬೇಕಿದೆ. ಸ್ಥಳಕ್ಕೆ ಮಾಯಾಕೊಂಡ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಟಿ ಮಂಜಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತ ವ್ಯಕ್ತಿಯ ಕುರಿತು ಪರಿಶೀಲನೆ ನಡೆಸಿದರು. ನಂತರ ಶವವನ್ನು ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ರವಾನಿಸಿದರು.