ನಿಯಮಬಾಹಿರವಾಗಿ ಕಾರ್ಯ ನಿರ್ವಹಿಸುವ ಶಾಲೆಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ ಸಾಮಾಜಿಕ ಕಾರ್ಯಕರ್ತ ಚನ್ನೇಶ್ ಎಂ ಜಕ್ಕಾಳಿ
ದಾವಣಗೆರೆ: ಜಿಲ್ಲೆಯ ಅನೇಕ ಶಾಲೆಗಳು ಮೂಲಭೂತ ಸೌಲಭ್ಯಗಳಿಲ್ಲದೆ ಕಾರ್ಯಾಚರಿಸುತ್ತಿವೆ. ತಹಶೀಲ್ದಾರ್ ಹಾಗೂ ದಾವಣಗೆರೆ ಜಿಲ್ಲಾಧಿಕಾರಿ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಚನ್ನೇಶ್ ಎಂ.ಜಕ್ಕಾಳಿ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅನೇಕ ಶಾಲೆಗಳು ನಿಯಮಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಶಾಲೆ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಳ್ಳದೆ ಸಂಬಂಧಪಟ್ಟ ಇಲಾಖೆಗಳು ಕ್ರಮಕೈಗೊಳ್ಳುತ್ತಿಲ್ಲ. ಇದೇ ರೀತಿ ವಿಳಂಬ ಧೋರಣೆ ಅನುಸರಿಸಿದರೆ ಇಲಾಖೆ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಸಮೀಪದ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯು ರಾಷ್ಟ್ರಧ್ವಜ ಹೊಂದದೆ, ರಾಷ್ಟ್ರಗೀತೆಗೆ ಗೌರವ ಕೊಡದೆ ಕಾರ್ಯಾಚರಿಸುತ್ತಿದೆ. ಈ ಬಗ್ಗೆ ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ಮೂಲಭೂತ ಸೌಲಭ್ಯ ಹೊಂದಿಲ್ಲದ ಶಾಲೆಗೆ ಸುಮಾರು ೨೩ ವರ್ಷಗಳಿಂದ ಮಾನ್ಯತೇ ನವೀಕರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಕ್ಷಣವೇ ಶಾಲೆಯ ಮಾನ್ಯತೆ ರದ್ದುಗೊಳಿಸಿ, ಸ್ಥಳ ಪರಿಶೀಲನೆ ನಡೆಸುವ ಜೊತೆಗೆ ನಿಯಮಬಾಹಿರ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಹನುಮಸಾಗರ ತಾಂಡಾದ ಮಂಜ ನಾಯ್ಕ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.