ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವಭಾವಿ ಸಭೆ : ಮಕ್ಕಳು ಅಂಕಗಳ ಬೆನ್ನತ್ತುವುದರೊಂದಿಗೆ ಕ್ರಿಯಾಶೀಲತೆ ಕಳೆದುಕೊಳ್ಳುವುದು ಬೇಡ: ರಘುವೀರ ಬಿ.ಎಸ್
ದಾವಣಗೆರೆ : ಅಂಕಗಳ ಬೆನ್ನತ್ತುವುದರೊಂದಿಗೆ ನಮ್ಮ ಮಕ್ಕಳು ಕ್ರಿಯಾಶೀಲತೆ ಕಳೆದುಕೊಳ್ಳುವುದು ಬೇಡ, ಪರ್ಯಾಯ ಮಾರ್ಗದಲ್ಲಿ ಪರೀಕ್ಷೆ ಪಾಸು ಮಾಡಲು ಹೋದರೆ ಜೀವನದಲ್ಲಿ ಫೇಲ್ ಆಗುತ್ತಾರೆ. ಹಾಗಾಗಿ ಅಂಕಗಳಿಗಿಂತ ಗುಣಮಟ್ಟದ ಫಲಿತಾಂಶಕ್ಕೆ ಶ್ರಮಿಸೋಣ ಎಂದು ದಾವಣಗೆರೆ ಜಿಲ್ಲಾ ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ಅಧಿಕಾರಿಗಳು ಹಾಗೂ ಧಾರವಾಡದ ಸಿಸ್ಲೆಪ್ನ ನಿರ್ದೇಶಕ ರಘುವೀರ ಬಿ.ಎಸ್ ಹೇಳಿದರು.
ಗುರುವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮುಖ್ಯೋಪಾಧ್ಯಯರ ಸಂಘ ದಾವಣಗೆರೆ ಇವರ ಸಂಯುಕ್ತಾ ಶ್ರಯದಲ್ಲಿ ಏರ್ಪಡಿಸಲಾಗಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ನಡೆಯುವ ಪರೀಕ್ಷೆಗಳಲ್ಲಿ ಫಲಿತಾಂಶದ ಬಗ್ಗೆ ಎಲ್ಲರಿಗೂ ಹೆಚ್ಚಿನ ಆಸಕ್ತಿ ಇದೆ. ಅದರಂತೆ ಪರಿಶ್ರಮ ಪಟ್ಟರೆ ಒಳ್ಳೆಯ ಅವಕಾಶಗಳು ಸಿಗಲಿವೆ ಹಾಗಾಗಿ ಪರೀಕ್ಷೆಯ ಬಗ್ಗೆ ಭಯ ಇಟ್ಟುಕೊಳ್ಳದೆ, ಆತ್ಮಸ್ಥೆರ್ಯದಿಂದ ಮಕ್ಕಳು ಪರೀಕ್ಷೆ ಬರೆಯಲು ಪ್ರೇರೇಪಿಸಿ ಎಂದರು.
ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ ಮಾತನಾಡಿ, ಈ ಪರೀಕ್ಷೆ ಜಿಲ್ಲೆಯ 22226 ವಿದ್ಯಾರ್ಥಿಗಳ ಭವಿಷ್ಯ, ವಿಧ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮವಾಗಿ ನಡೆಯಲಿ, ಅತಿಯಾದ ಆತ್ಮವಿಶ್ವಾಸ ಬೇಡ, ಪರೀಕ್ಷೆಗಳ ಆರಂಭದಿಂದ ಅಂತ್ಯದವರೆಗೂ ಎಲ್ಲಾ ಅಧಿಕಾರಿಗಳು ಎಚ್ಚರದಿಂದಿರಬೇಕು. ಈ ಹಿಂದಿನ ಎಲ್ಲಾ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಿದ ಹೆಗ್ಗಳಿಕೆ ನಮ್ಮ ಜಿಲ್ಲೆಗಿದೆ ಹಾಗಾಗಿ ಸರ್ಕಾರ ನೀಡುವ ಎಲ್ಲಾ ಆದೇಶಗಳನ್ನು ಪರಿಪಾಲನೆ ಮಾಡುವ ಮೂಲಕ ಪರೀಕ್ಷೆಗಳು ಸುವ್ಯವಸ್ಥೆಯಿಂದ ನಡೆಯಲಿ ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ನಿಷೇಧವಿದ್ದು, ಪರೀಕ್ಷಾ ದಿನಗಳಂದು ಕೇಂದ್ರಗಳ ಸುತ್ತಮುತ್ತ ಜೆರಾಕ್ಸ್ ಮತ್ತು ಸೈಬರ್ ಕೆಫೆ ಮುಚ್ಚಿಸಲು ಕ್ರಮ ವಹಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಪರೀಕ್ಷೆಯಲ್ಲಿ ಹಲವಾರು ಮಾರ್ಪಾಡುಗಳಾಗುತಿದ್ದು ಎಸ್.ಓ.ಪಿ ಗಳನ್ನು ಸರಿಯಾಗಿ ಪಾಲಿಸಿ. ಈ ಬಾರಿ ಪರೀಕ್ಷೆಯಲ್ಲಿ ಆರೋಗ್ಯ ಅಧಿಕಾರಿಗಳ ಪಾತ್ರವೂ ಹೆಚ್ಚಾಗಿದೆ, ಪರೀಕ್ಷೆ ನಡೆಯುವ ಮುನ್ನ ಹಾಗೂ ನಂತರ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು, ಎಲ್ಲರೂ ಒಗ್ಗಟ್ಟಿನಿಂದ ಮುಂಜಾಗೃತೆವಹಿಸಿ ಜಿಲ್ಲೆಗೆ ಒಳ್ಳೆಯ ಹೆಸರು ತರುವ ಪ್ರಯತ್ನ ಮಾಡುವ ಮಾಡೋಣ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್ ಮಾತನಾಡಿ, ಕಳೆದೆರಡು ವರ್ಷಗಳಿಂದ ಕೋವಿಡ್ ನಿಂದಾಗಿ ನಮ್ಮ ಜಿಲ್ಲೆಯ ಫಲಿತಾಂಶದಲ್ಲಿ 16, 17 ನೇ ಸ್ಥಾನದಲ್ಲಿದೆ. ಶಿಕ್ಷಕರು ಮಕ್ಕಳಿಗೆ ಕೇವಲ ಪುಸ್ತಕದಲ್ಲಿರುವ ಪಠ್ಯಗಳನ್ನು ತಿಳಿಸುವುದರ ಜೊತೆಗೆ ಸಂವಹನ, ನಾಯಕತ್ವದ ಗುಣಗಳ ಬಗ್ಗೆ ಮಾರ್ಗದರ್ಶನವನ್ನು ತಿಳಿಸುವುದರೊಂದಿಗೆ ಜಿಲ್ಲೆಯಲ್ಲಿ ಶಿಕ್ಷಣದ ಶೇಕಡವಾರು ಪ್ರಗತಿ ಸಾಧಿಸಲು ಶ್ರಮಪಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೋವಿಡ್ ಒಂದನೆಯ, ಎರಡನೇ, ಮೂರನೇ ಅಲೆ ಹೀಗೆ ಬರೀ ಅಲೆಗಳನ್ನು ನೋಡುತ್ತಿದ್ದ ನಾವು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದಲೂ ಒಂದೂ ಕೋವಿಡ್ ಪ್ರಕರಣ ಇಲ್ಲದಿರುವುದು ಹೆಮ್ಮೆಯ ವಿಷಯ, ಪ್ರತಿ ಪರೀಕ್ಷಾ ಕೇಂದ್ರಗಳಿಗೆ ತಲಾ ಇಬ್ಬರು ಆರೋಗ್ಯ ಸಹಾಯಕರು/ಆಶಾ ಕಾರ್ಯಕರ್ತೆಯರನ್ನು (ಅಗತ್ಯ ಔಷಧಗಳೊಂದಿಗೆ) ನಿಯೋಜಿಸಲಾಗುವುದು. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ರೋಗ ಲಕ್ಷಣಗಳು ಇದ್ದರೆ ಪರೀಕ್ಷೆ ನಡೆಸಲಾಗುತ್ತದೆ. ಕೋವಿಡ್ ಮಾರ್ಗಸೂಚಿಯಂತೆ ಎಸೆಸೆಲ್ಸಿ ಪರೀಕ್ಷೆಗೆ ಆರೋಗ್ಯ ಇಲಾಖೆಯ ಎಲ್ಲಾ ಸಹಕಾರ ನೀಡುತ್ತೇವೆ ಎಂದರು.
ಡಿ.ಡಿಪಿ.ಐ ಜಿ.ಆರ್ ತಿಪ್ಪೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 22,226 ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿದ್ದು, ಒಟ್ಟು 90 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳವರೆಗೆ ತೆರಳಲು ಕೆ.ಎಸ್.ಆರ್.ಟಿ.ಸಿ ಯವರು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಜಿಲ್ಲೆಯಲ್ಲಿ ಉತ್ತಮವಾಗಿ ಪರೀಕ್ಷೆ ನಡೆಯಲು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಎಲ್ಲಾ ಮುಂಜಾಗೃತ ಕ್ರಮ ವಹಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಎಸ್ಎಸ್ಎಲ್ಸಿ ಪರೀಕ್ಷಾ ವೀಕ್ಷಕ ಎಸ್.ವಿ.ಬಿ. ಪ್ರಸಾದ್, ಜಿಲ್ಲಾ ಪ್ರೌಢ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಹಾಲಪ್ಪ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥಯ್ಯ, ಡಿವೈಪಿಸಿಗಳು ಎಲ್ಲಾ ವಿಷಯದ ಪರಿವೀಕ್ಷಕರು ಹಾಗೂ ಎಪಿಸಿಗಳು, ಬಿಇಓಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.