ರೇಣುಕಾಚಾರ್ಯ ರಾಜಕೀಯ ನಿವೃತ್ತಿಗೆ ವಿಷದ ಬಾಟಲಿ ಹಿಡಿದು ಬೆಂಬಲಿಗರ ವಿರೋಧ

ಹೊನ್ನಾಳಿ: ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಏಕಾಏಕಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬೆಂಬಲಿಗರು, ಕಾರ್ಯಕರ್ತರು ಅವರ ನಿವಾಸದ ಬಳಿ ಭಾನುವಾರ ಜಮಾಯಿಸಿ, ನಿರ್ಧಾರ ಹಿಂಡಪಡೆಯುವಂತೆ ಆಗ್ರಹಿಸಿದರು.
ಕಾರ್ಯಕರ್ತರ ಒತ್ತಾಯಕ್ಕೆ ಮಣಿದ ರೇಣುಕಾಚಾರ್ಯ ಒಂದು ವಾರದ ನಂತರ ನಿರ್ಧಾರ ತಿಳಿಸುವುದಾಗಿ ಹೇಳಿದರು.
‘ನಾನು ರಾಜಕೀಯಕ್ಕೆ ಬಂದಾಗಿನಿಂದ ಜನರ ಮಧ್ಯ ಇದ್ದು ಜನಸೇವೆ ಮಾಡಿದ್ದೇನೆ. ಮೂರು ಅವಧಿಯಲ್ಲಿ ನೂರಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕೊರೊನಾ ಸಂಕಷ್ಟದಲ್ಲೂ ಸಂತ್ರಸ್ತರ ಬಳಿ ಇದ್ದು ಸೇವೆ ಮಾಡಿದ್ದೇನೆ. ಆದರೂ ಚುನಾವಣೆಯಲ್ಲಿ ಸೋಲಾಯಿತು. ನನ್ನ ಸೋಲಿಗೆ ಕಾರಣ ಏನು, ನಾನು ಮಾಡಿದ ತಪ್ಪಾದರೂ ಏನು ಎಂದು ಪ್ರಶ್ನಿಸಿದ ಅವರು, ನಾನೇ ಸರಿ ಇಲ್ಲ ಎಂದು ರಾಜಕೀಯದಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಇದಕ್ಕೆ ಒಪ್ಪದ ಕಾರ್ಯಕರ್ತರು, ಬೆಂಬಲಿಗರು, ‘ನೀವಿದ್ದರೆ ನಾವು, ಈ ಚುನಾವಣೆಯಲ್ಲಿ ಸೋಲಾಗಿರಬಹುದು. ಮುಂದಿನ ಚುನಾವಣೆಯಲ್ಲಿ ಇದಕ್ಕಿಂತ ಹೆಚ್ಚು ಲೀಡ್‍ನಲ್ಲಿ ಗೆಲ್ಲಿಸಿಕೊಂಡು ಬರುತ್ತೇವೆ. ನಿರ್ಧಾರವನ್ನು ಬದಲಾಯಿಸಿಕೊಳ್ಳಿ’ ಎಂದು ಮನವಿ ಮಾಡಿದರು.
ಕಾರ್ಯಕರ್ತರು, ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ‘ನನಗೆ ಒಂದು ವಾರ ಸಮಯ ಕೊಡಿ, ನಂತರ ನನ್ನ ನಿರ್ಧಾರ ತಿಳಿಸುತ್ತೇನೆ ಎಂದರು.