ರಾಜ್ಯ, ಕೇಂದ್ರ ಸರ್ಕಾರಗಳಿಗೆ ಧನ್ಯವಾದ! ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ, ಉಕ್ರೇನ್‍ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಬಂದ ವಿಧ್ಯಾರ್ಥಿಗಳ ಮನದಾಳದ ಮಾತು!ಗಳು
ದಾವಣಗೆರೆ : ವೈದ್ಯಕೀಯ ವಿಧ್ಯಾಬ್ಯಾಸಕ್ಕೆಂದು ಉಕ್ರೇನ್ ದೇಶಕ್ಕೆ ತೆರಳಿದ್ದ ದಾವಣಗೆರೆಯ ವಿದ್ಯಾರ್ಥಿಗಳು ರಷ್ಯಾ – ಉಕ್ರೇನ್ ಯುದ್ದದಿಂದಾಗಿ ವಾಪಸ್ ಆಗುವಾಗ ತಾವು ಅನುಭವಿಸಿದ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು ಹಾಗೂ ತಮ್ಮನ್ನ ತಾಯ್ನಾಡಿಗೆ ಕರೆಸಿಕೊಳ್ಳಲು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತೋರಿದ ಕಾಳಜಿಯನ್ನು ಮನದುಂಬಿ ಸ್ಮರಿಸಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಯುದ್ದ ಪೀಡಿತ ಉಕ್ರೇನ್ ನೆಲದಲ್ಲಿ ಕಣ್ಣಾರೆ ಕಂಡ ಭಯಂಕರ ಭೀಬತ್ಸ ಘಟನೆಗಳನ್ನ ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಕೀವ್, ಖಾರ್ಕಿವ್, ಪಿಸೋಚಿನ್, ಮರಿಯ ಪೋವ್ ಭಾಗಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಮಗೆ ಫೆ,24 ರಿಂದ ಆರಂಭವಾದ ಯುದ್ದ ಒಮ್ಮೆಲೆ ಭಯಭೀತರನ್ನಾಗಿ ಮಾಡಿತು. ದಿಕ್ಕೇ ತೋಚದಂತಾಯಿತು. ಅನ್ನ ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ, ಗುರಿ ತಲುಪಬೇಕೆಂದರೆ ನೂರಾರು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾದ ಸ್ಥಿತಿ, ಎಲ್ಲಿ ನಮ್ಮ ಮೇಲೆ ಬಾಂಬುಗಳು ಬೀಳುತ್ತವೆಯೋ ಎಂಬ ದುಗುಡದ ಮಧ್ಯೆಯೂ ಮನೆಯವರು, ನರೇಂದ್ರ ಮೋದಿಜಿ, ಮುಖ್ಯಮಂತ್ರಿಗಳು, ಭಾರತೀಯ ಎಂಬೆಸಿ, ದಾವಣಗೆರೆ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ಒಟ್ಟಾರೆ ಜಿಲ್ಲಾಡಳಿತ ನೀಡಿದ ನೆರವನ್ನು ಎಂದಿಗೂ ಮರೆಯಲಾಗದು.
ದುರಾದೃಷ್ಟವಶಾತ್ ನವೀನ್ನನ್ನು ಕಳಕೊಂಡೆವು ಅವನನ್ನು ಹೊರತುಪಡಿಸಿ ಎಲ್ಲಾ ಕನ್ನಡದ ಮಕ್ಕಳು ಸುರಕ್ಷಿತವಾಗಿ ವಾಪಸ್ ಬಂದಿದ್ದೇವೆ ಎಂದು ತಮಗಾದ ಅನುಭವಗಳನ್ನು ಹಂಚಿಕೊಂಡರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಉಕ್ರೇನ್ನಲ್ಲಿ ತೊಂದರೆಗೆ ಸಿಲುಕಿದ್ದ ವಿದ್ಯಾರ್ಥಿಗಳ ಪೋಷಕರೊಂದಿಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಹಾಯ ವಾಣಿ ತೆರೆದು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದಿಂದ ಮಾಹಿತಿ ಪಡೆದು ನಿರಂತರವಾಗಿ ಪಾಲಕರಿಗೆ ಮಾಹಿತಿ ಒದಗಿಸುವ ಜೊತೆಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಿ, ಸುರಕ್ಷಿತವಾಗಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಮರಳಿ ಕರೆತರಲಾಗಿದೆ. ಇಡೀ ಜಿಲ್ಲಾಡಳಿತ ಒಟ್ಟಾಗಿ ಪ್ರವಾಹದ ಸಂದರ್ಭದಲ್ಲಿ ಕಾರ್ಯ ಚಟುವಟಿಕೆ ಮಾಡುವ ರೀತಿಯಲ್ಲಿ ಕೆಲಸ ಮಾಡಿ ಎಲ್ಲರನ್ನು ಅವರ ಮನೆಗೆ ತಲುಪಿಸಿ, ಅವರ ಮನೆಗೆ ತೆರಳಿ ಮಾತನಾಡಿಸಿ ಬಂದಿದ್ದೇವೆ, ಆಪರೇಷನ್ ಗಂಗಾ ಮೂಲಕ ಉಕ್ರೇನ್ ಹಾಗೂ ರಷ್ಯಾ ಬಿಕಟ್ಟಿನಿಂದ ತೊಂದರೆಗೆ ಸಿಲುಕಿ ಮರಳಿದ ವಿದ್ಯಾರ್ಥಿಗಳ ಭವಿಷ್ಯದ ವಿದ್ಯಾಭ್ಯಾಸದ ಕುರಿತಂತೆ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ವೈದ್ಯಕೀಯ ವಿದ್ಯಾರ್ಥಿಯಾದ ಸೈಯ್ಯದ್ ಹಬೀಬಾ ಮಾತನಾಡಿ, ಫೆ,24 ರಂದು ಉಕ್ರೇನ್ನಲ್ಲಿ ಬೆಳಗಿನಜಾವ ಯುದ್ಧ ಶುರುವಾಗಿದೆ ಎಂಬ ಮಾಹಿತಿ ದೊರೆಯಿತು, ನಂತರ ಭಯಗೊಂಡ ನಾವುಗಳು ನಮ್ಮ ಕಾಲೇಜಿನ ಅಧ್ಯಾಪಕರ ಜೊತೆ ಮಾತನಾಡಿ ಭಾರತದ ರಾಯಬಾರ ಕಛೇರಿಯನ್ನು ಸಂಪರ್ಕಿಸಿ ನಾವಿದ್ದ ಪ್ರದೇಶದಿಂದ ಉಕ್ರೇನ್ ಗಡಿದಾಟಿ ಅಲ್ಲಿಂದ ರೂಮೇನಿಯಾ ತಲುಪಿ ಭಾರತಕ್ಕೆ ಮರಳಿದೆವು ಎಂದರು. ವಿದ್ಯಾರ್ಥಿ ಪ್ರವೀಣ್ ಮಾತನಾಡಿ, ಯುದ್ಧಶುರುವಾದ ನಂತರ 22 ಗಂಟೆಗಳ ಕಾಲ ಊಟ ಸಿಗದೆ ಉಪವಾಸ ಇದ್ದೇವು, ನಂತರ ಉಕ್ರೇನ್ ಗಡಿ ದಾಟಿದ ನಂತರ ಆಹಾರ ದೊರೆಯಿತು, ಉಕ್ರೇನ್ ಗಡಿ ದಾಟುವ ಸಂದರ್ಭದಲ್ಲಿ ಭಾರತದ ಧ್ವಜ ನಮಗೆ ರಕ್ಷಣೆ ನೀಡಿತು ಎಂದು ಹೇಳಿದರು. ವಿದ್ಯಾರ್ಥಿ ಮನೋಜ್ ಮಾತನಾಡಿ, ಮರಳಿ ಭಾರತ ಸೇರಿದ್ದು ಖುಷಿ ತಂದಿದೆ, ನಮ್ಮನ್ನು ಮರಳಿ ತರಲು ಶ್ರಮಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು.
ವಿದ್ಯಾರ್ಥಿಗಳ ಪೋಷಕರು ಮಾತನಾಡಿ ಅತ್ಯಂತ ಸುರಕ್ಷಿತವಾಗಿ ನಮ್ಮ ಮಕ್ಕಳನ್ನು ನಮ್ಮ ಮನೆಗೆ ತಲುಪಿಸಿದ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಋಣಿಯಾಗಿರುತ್ತೇವೆ, ಮುಂದಿನ ಅವರ ವಿದ್ಯಾಭ್ಯಾಸಕ್ಕೆ ಸರ್ಕಾರ ನೆರವಿಗೆ ಬರಲಿ ಎಂದರು. ಇದೆ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಹಾಗೂ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.