ನಕಲಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದವರ ಮೇಲೆ ಕ್ರಮಕ್ಕೆ ಮುಂದಾಗದ ಜಿಲ್ಲಾಡಳಿತ..! ಮಾ.13ರಂದು ಡಿಸಿ ಕಚೇರಿ ಮುಂದೆ ನಿರಂತರ ಧರಣಿ ಸತ್ಯಾಗ್ರಹ.!

ನಕಲಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದವರ ಮೇಲೆ ಕ್ರಮಕ್ಕೆ
ದಾವಣಗೆರೆ: `ಬೇಡ ಜಂಗಮ’ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಜಿಲ್ಲಾಧಿಕಾರಿಗಳ ವಿರುದ್ಧ ಇದೇ 13ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ ಎಚ್ಚರಿಸಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ವೇದಿಕೆಯ ಸಂಚಾಲಕ ಹೆಚ್.ಮಲ್ಲೇಶ್, ಅನೇಕರು ರಾಜಕಾರಣದ ಚುಕ್ಕಾಣಿ ಹಿಡಿಯಲು ನಕಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಬಹಿರಂಗವಾಗಿಯೇ ಪರಿಶಿಷ್ಟರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಡಳಿತ ಒತ್ತಡಕ್ಕೆ ಮಣಿದೋ ಅಥವಾ ನಿರ್ಲಕ್ಷ್ಯಿಸಿಯೋ ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಒಂದು ವಾರದೊಳಗೆ ನಕಲಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಾಯಕೊಂಡ ಕ್ಷೇತ್ರದಲ್ಲಿ ವಾಗೀಶ್ ಸ್ವಾಮಿ ಅವರು ಬೇಡ ಜಂಗಮ ಎಂದು ನಕಲಿ ಜಾತಿ ಪ್ರಮಾಣ ಪತ್ರ ಮಾಡಿಸಿಕೊಂಡು ರಾಜಕಾರಣ ಮಾಡಲು ಹೊಟಿದ್ದು, ಕ್ಷೇತ್ರದ ಸಂಸದರು, ಶಾಸಕರುಗಳು ಈ ಬಗ್ಗೆ ಕ್ರಮ ಕೈಗೊಂಡು ಪರಿಶಿಷ್ಟ ಜಾತಿ, ವರ್ಗಗಳ ಸಮುದಾಯದವರ ಹಿತ ಕಾಪಾಡಬೇಕು ಎಂದು ಹೇಳಿದರು.
ನಕಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಚಿನ್ನಸಮುದ್ರದ ಶೇಖರನಾಯ್ಕ ಮಾತನಾಡಿ, ಮಾ.13ರಂದು ನಡೆಯುವ ಧರಣಿಗೆ ನಾಳೆಯಿಂದಲೇ ಹಳ್ಳಿಹಳ್ಳಿಗಳಲ್ಲಿ ಸಭೆ ನಡೆಸಿ ಜನರನ್ನು ಜಾಗೃತಗೊಳಿಸಲಾಗುವುದು. ಈ ವೇಳೆ ಯಾವುದೇ ಅಹಿತರ ಘಟನೆ ನಡೆದರೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮಶೇಖರಪ್ಪ, ಲಕ್ಷ್ಮಣ್ ರಾಮಾವತ್, ವೆಂಕಟೇಶ್ ಬಾಬು, ಸಂದೇಶ್, ಜಿ.ಎನ್. ಮಲ್ಲಿಕಾರ್ಜುನ್ ಇತರರು ಉಪಸ್ಥಿತರಿದ್ದರು.