ಸಿದ್ದರಾಮಯ್ಯರನ್ನು ಹೊಡೆದುಹಾಕಲು ಕರೆಕೊಟ್ಟ ಸಚಿವರ ಬಂಧನವಾಗಲೇಬೇಕು: ಕಾಂಗ್ರೆಸ್ ಪಟ್ಟು
ಚಾಮರಾಜನಗರ: ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಬೇಕು ಎಂದು ಅವರ ಹತ್ಯೆಗೆ ಕರೆ ನೀಡಿರುವ ಸಚಿವ ಅಶ್ವತ್ಥ್ ನಾರಾಯಣ ಅವರ ವಿರುದ್ದ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಹನೂರಿನಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು ಹಾಗೂ ನಮ್ಮ ರಾಜ್ಯದ ಆಸ್ತಿ. ಅಧಿಕಾರದ ಮದದಲ್ಲಿರುವ ಮಂತ್ರಿಯೊಬ್ಬರು ಅದ್ಯಾವ ಇತಿಹಾಸ ಓದಿಕೊಂಡು ಬಂದಿದ್ದರೋ ಟಿಪ್ಪುವನ್ನು ಹೊಡೆದು ಹಾಕಲಾಗಿತ್ತು, ಅದೇ ರೀತಿ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಬೇಕು ಎಂದು ಕರೆ ನೀಡಿದ್ದಾರೆ. ಉನ್ನತ ಶಿಕ್ಷಣ ಸಚಿವರ ಬಾಯಲ್ಲಿ ಇಂತಹ ಮಾತು ಬಂದರೂ ಸರ್ಕಾರ, ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಹಾಗೂ ಗೃಹಸಚಿವರು, ಡಿಜಿ ಏನು ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಉತ್ತರಿಸಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೆ ಎಂದರು.
ಅಧಿವೇಶನದಲ್ಲಿ ಸಚಿವರು ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮಾಪಣೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಇದು ಕ್ಷಮೆಯ ವಿಚಾರವಲ್ಲ. ಇದೊಂದು ಪ್ರಚೋದನಕಾರಿ ಹೇಳಿಕೆ. ಇಂತಹ ಹೇಳಿಕೆ ಯಾರೇ ನೀಡಿದ್ದರೂ ಅದು ತಪ್ಪು. ಈ ದೇಶದ ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಗಳು, ಗೃಹಸಚಿವರು ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದ ಹೆಸರಿಗೆ ಕಪ್ಪುಚುಕ್ಕೆ ಬರುವ ರೀತಿಯಲ್ಲಿ ಆಡಳಿತ ನೀಡಿದ್ದಾರೆ. ಇದೇ ಮಾತನ್ನು ಅವರ ವಿರುದ್ಧ ಮಾತನಾಡಿದ್ದರೆ ಸುಮ್ಮನೆ ಬಿಡುತ್ತಿದ್ದರಾ? ಪೇಸಿಎಂ ಎಂಬ ಪ್ಟೋಸ್ಟರ್ ಅಂಟಿಸಿದ್ದಕ್ಕೆ ನಮ್ಮ ವಿರುದ್ಧ ಕೇಸ್ ದಾಖಲಿಸಿದರು. ನಮ್ಮ ಕಾರ್ಯಕರ್ತರು ಹೋರಾಟ ಮಾಡಿದರೆ ಅವರನ್ನು ಬಂಧಿಸಿ ಕೇಸ್ ಹಾಕಿದರು. ಮಾಜಿ ಮುಖ್ಯಮಂತ್ರಿಯನ್ನು ಹೊಡೆದುಹಾಕಿ ಎಂದು ಹೇಳಿದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಡಿಕೆಶಿ ಪ್ರಶ್ನಿಸಿದರು.
ಇದರಲ್ಲಿ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಹೀಗಾಗಿ ಅವರು ಸುಮ್ಮನೆ ಕೂತಿದ್ದಾರೆ. ಅವರೂ ಇದಕ್ಕೆ ಜವಾಬ್ದಾರರು. ಮುಂದೆ ಅವರು ನಿವೃತ್ತರಾಗಿರಲಿ, ಅಧಿಕಾರದಲ್ಲಿರಲಿ, ಬಿಡಲಿ ಅವರೂ ಇದರ ಪರಿಣಾಮ ಎದುರಿಸಲೇಬೇಕಾಗುತ್ತದೆ. ಆ ಸಚಿವ ಎಲ್ಲಿ ಹೇಳಿಕೆ ನೀಡಿದ್ದಾನೋ ಆ ಪ್ರದೇಶದ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ, ಆತನನ್ನು ಬಂಧಿಸುವ ಕೆಲಸ ಮಾಡಬೇಕು ಎಂದು ನಾನು ಹಾಗೂ ಪಕ್ಷ ಒತ್ತಾಯಿಸುತ್ತೇವೆ ಎಂದರು.
ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಕೇಳಿದಾಗ, ‘ಸಂಸದ ಪ್ರತಾಪ್ ಸಿಂಹ ಅವರು ಉಪಕುಲಪತಿ ಹುದ್ದೆಗೆ 5 ಕೋಟಿ ಹಣ ನೀಡಬೇಕು ಎಂದಿದ್ದರು. ಪಿಎಸ್ಐ ನೇಮಕಾತಿಯಿಂದ ಹಿಡಿದು ಪ್ರತಿ ಇಲಾಖೆ ನೇಮಕಾತಿಯಲ್ಲೂ ಅಕ್ರಮ ನಡೆಯುತ್ತಿದೆ. ಈ ರಾಜ್ಯದಲ್ಲಿ ಅಕ್ರಮಗಳಿಗೆ ಅವಕಾಶ ಹೆಚ್ಚಾಗಿದೆ. ಹೀಗಾಗಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಈ ಹಿಂದೆಯೂ ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತು. ಆದರೆ ಈ ಸರ್ಕಾರದ ಅವಧಿಯಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಜೈಲಿಗೆ ಹೋಗಿದ್ದಾರೆ. ಇದಕ್ಕೆಲ್ಲ ದುರಾಡಳಿತವೇ ಕಾರಣ’ ಎಂದರು.
ಓಲಾ ಕಂಪನಿ ತಮಿಳುನಾಡಿಗೆ ಸ್ಥಳಾಂತರವಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಸರ್ಕಾರದ ದುರಾಡಳಿತ, ಕೋಮುಸಂಘರ್ಷದಿಂದ ರಾಜ್ಯದಲ್ಲಿ ಯಾರೂ ಕೂಡ ಬಂದು ಹೂಡಿಕೆ ಮಾಡಲು ಸಿದ್ಧರಿಲ್ಲ. ಎಲ್ಲರೂ ಬೇರೆ ರಾಜ್ಯಗಳತ್ತ ಮುಖ ಮಾಡಿದ್ದಾರೆ. ಈ ಸರ್ಕಾರ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 10 ಲಕ್ಷ ಕೋಟಿ ಬಂದಿದೆ ಎಂದಿತು. ಎಲ್ಲಿ ಬಂಡವಾಳ ಹೂಡಿಕೆಯಾಗಿದೆ? ಎಂದು ಸರ್ಕಾರ ಹೇಳಲಿ. ಈ ಸರ್ಕಾರ ರಾಜ್ಯಕ್ಕೆ ಕಳಂಕ ತಂದಿದ್ದು, ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಜನ ಸಹಕಾರ ನೀಡಬೇಕು. ರಾಜ್ಯದಲ್ಲಿ ಉತ್ತಮ ಆಡಳಿತ ಮರುಸ್ಥಾಪಿಸಿ ರಾಜ್ಯವನ್ನು ಅಭಿವೃದ್ಧಿಶೀಲವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ’ ಎಂದು ತಿಳಿಸಿದರು.