ಬಂಟ್ವಾಳ : ಯಾರೂ ಇಲ್ಲದ ವೇಳೆ ಮನೆಯೊಳಗೆ ನುಗ್ಗಿ ಅಡಕೆ ಕದ್ದೊಯ್ದ ಖದೀಮರು
ಬಂಟ್ವಾಳ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಿಂಭಾಗದ ಕಿಟಕಿಯ ರಾಡ್ ಮುರಿದು ಒಳಪ್ರವೇಶೀಸಿದ ಕಳ್ಳರು ಮನೆಯ ಮೇಲ್ಛಾವಣಿಯಲ್ಲಿ ಇಟ್ಟಿದ್ದ ಸಾವಿರಾರು ರೂಪಾಯಿ ಮೌಲ್ಯದ ಅಡಿಕೆ ಕಳವುಗೈದ ಘಟನೆ ಬಿ ಮೂಡ ಗ್ರಾಮದ ಬಂಟ್ವಾಳ ಬೈಪಾಸ್ ಬಳಿ ನಡೆದಿದೆ.
ಬಂಟ್ವಾಳ-ಬೈಪಾಸ್ ರಸ್ತೆ ನಿವಾಸಿ ಕೆ ಜಿನಚಂದ್ರ ಜೈನ್ ಅವರ ಮನೆಯಲ್ಲಿ 11 ಗೋಣಿ ಚೀಲದಲ್ಲಿ ಅಂದಾಜು 3 ಕ್ವಿಂಟಾಲ್ ಸುಲಿಯದ ಅಡಿಕೆಯನ್ನು ಒಣಗಿಸಿ ವಾರದ ಹಿಂದೆ ಮನೆಯ ಮೇಲ್ಛಾವಣಿಯಲ್ಲಿ ಇಟ್ಟಿದ್ದರು. ಮಾರ್ಚ್ 1 ರಂದು ಸಂಜೆ ಇವರು ಮನೆಗೆ ಬೀಗ ಹಾಕಿ ತೆರಳಿದ್ದವರು ಮಾ 2 ರಂದು ಬೆಳಿಗ್ಗೆ ಬಂದು ನೋಡಿದಾಗ ಮನೆಯ ಹಿಂಬದಿ ಬಾಗಿಲು ತೆರೆದಿರುವುದು ಕಂಡು ಬಂದು ಪರಿಶೀಲನೆ ನಡೆಸಿದಾಗ ಅಡಿಕೆ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಮನೆಯ ಹಿಂಭಾಗದ ಕಿಟಕಿಯ ರಾಡ್ ತೆರೆದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಮನೆಯಲ್ಲಿ ಸುಲಿಯದೇ ಇಟ್ಟಿದ್ದ 11 ಗೋಣಿ ಚೀಲ ಅಡಕೆಯನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.