ನಗರದಲ್ಲಿ ಸ್ತನ್ಯ ಹಾಲು ಬ್ಯಾಂಕ್ ಪ್ರಾರಂಭಿಸಲು ಚಿಂತನೆ – ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ : ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಜಾಗತಿಕ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ್, ಮಗು ಹಾಗೂ ತಾಯಿಯ ಉತ್ತಮ ಆರೋಗ್ಯಕ್ಕಾಗಿ ಸ್ತನ ಪಾನ ಬಹಳ ಮುಖ್ಯವಾಗಿದ್ದು, ಎಲ್ಲರೂ ಇದರ ಬಗ್ಗೆ ಗಮನಹರಿಸಬೇಕಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ನಗರದಲ್ಲಿ ಸ್ತನ್ಯ ಹಾಲು ಬ್ಯಾಂಕ್ ಪ್ರಾರಂಭಿಸುವ ಚಿಂತನೆ ಇದ್ದು, ಅನೇಕ ಸಂದರ್ಭಗಳಲ್ಲಿ ತಾಯಿಯ ಎದೆ ಹಾಲು ಮಗುವಿಗೆ ಉಣಿಸಲು ಸಾಧ್ಯವಾಗದ ಸ್ಥಿತಿ ಇದ್ದಾಗ, ಇದು ಅನುಕೂಲವಾಗಲಿದೆ ಎಂದು ತಿಳಿಸಿ, ಸಭೆಯಲ್ಲಿ ನೆರೆದಿದ್ದ ಮಹಿಳೆಯರ ಜೊತೆ ಸಂವಾದ ನಡೆಸಿ ಸ್ತನ ಪಾನದ ಬಗ್ಗೆ ಅವರಿಗಿರುವ ಮಾಹಿತಿ ಸಂದೇಹ, ಮಹತ್ವ ಮತ್ತು ಅವರ ಅನುಭವಗಳನ್ನು ಕುರಿತು ಚರ್ಚೆ ನಡೆಸಿದರು.
ಮಕ್ಕಳ ತಜ್ಞರಾದ ಡಾ. ಸಿ.ಆರ್ ಬಾಣಾಪುರ್ ಮಠ ಮಾತನಾಡಿ ಗರ್ಭಿಣಿ ಸ್ತ್ರೀಯರ ಆರೈಕೆ ಹೆರಿಗೆಯಾದ ನಂತರ ಮಕ್ಕಳು ಹಾಗೂ ತಾಯಿಯ ಬಾಂಧವ್ಯ ಬೆಳೆಯಲು ಮೊದಲು ಮಾಡಬೇಕಾದಂತಹ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ ತಾಯಿ ಮತ್ತು ಮಗುವಿನ ಹಾರೈಕೆ ಹಾಗೂ ಆರೋಗ್ಯವಂತ ಮಗುವಿನ ಲಾಲನೆ ಪಾಲನೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ತಂದಿದ್ದು ಅದರ ಸದುಪಯೋಗಪಡಿಸಿಕೊಳ್ಳಲು ತಿಳಿಸಿ ಆರೋಗ್ಯವಂತ ಮಗುವಿಗೆ ತಾಯಿಯ ಎದೆಯ ಹಾಲು ಎಷ್ಟು ಮುಖ್ಯ ಎಂಬುದರ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಬಿ.ಎಸ್ ಪ್ರಸಾದ್, ವೈದ್ಯಕೀಯ ನಿರ್ದೇಶಕರಾದ ಡಾ. ಅರುಣ್ ಕುಮಾರ್ ಅಜ್ಜಪ್ಪ, ಮಕ್ಕಳ ವಿಭಾಗದ ಡಾ. ಎನ್.ಕೆ ಕಾಳಪ್ಪನವರ್, ಡಾ. ಲತಾ ಜಿ.ಎಸ್ ಮಾತನಾಡಿದರು,
ಬಾಪೂಜಿ ಮಕ್ಕಳ ಆಸ್ಪತ್ರೆ ವೈದ್ಯಕೀಯ ನಿರ್ದೇಶಕರಾದ ಡಾ. ಮೂಗನಗೌಡ ಪಾಟೀಲ್, ಡಾ. ಚಂದ್ರಶೇಖರ್ ಗೌಳಿ, ಡಾ. ಶಾಂತಲಾ ಸೇರಿದಂತೆ ವೈದ್ಯರು ನರ್ಸಿಂಗ್ ಸಿಬ್ಬಂದಿ ಬಾಪೂಜಿ ಸಂಸ್ಥೆಯ ವಿವಿಧ ವಿಭಾಗಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.