ತುಂಗಭದ್ರಾ ನದಿ ದಂಡೆ ಮೇಲೆ ಕುಳಿತ ಮೊಸಳೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೆಲವರು, ಆತಂಕದಲ್ಲಿ ಹಲವರು
ನ್ಯಾಮತಿ: ತುಂಗಾ ಭದ್ರಾ ನದಿ ದಡದಲ್ಲಿ ಮೊಸಳೆಯೊಂದು ಕಂಡಿದೆ. ದಂಡೆಯ ಮೇಲೆ ಬಹಳ ಹೊತ್ತು ಕುಳಿತಿದ್ದ ಮೊಸಳೆ ಜೊತೆ ಕೆಲವರು ಸೆಲ್ಫಿ ತೆಗೆಸಿಕೊಂಡರೆ, ಸನಿಹದ ಗ್ರಾಮಸ್ಥರ ಭೀತಿಗೂ ಒಳಗಾಗಿದ್ದಾರೆ.
ನ್ಯಾಮತಿ ತಾಲ್ಲೂಕಿನ ಕುರುವ ಗೆಡ್ಡೆ, ಗೋವಿನಕೋವಿ ಮತ್ತು ರಾಂಪುರ ಗ್ರಾಮದ ಹರಿಯುವ ತುಂಗಾ ಭದ್ರಾ ನದಿಯಲ್ಲಿ ಮೊಳಸೆಯೊಂದು ಕಾಣಿಸಿಕೊಂಡಿದೆ. ಜಲಾಶಯದಿಂದ ಮೈಲಾರ ಜಾತ್ರೆಗೆ ನೀರು ಬಿಟ್ಟಿದ್ದರಿಂದ ಮೊಸಳೆ ನೀರಿನ ಜೊತೆಗೆ ತೇಲಿ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮಳಲಿ , ಚೀಲೂರು ಕೋಟೆಹಾಳ್ , ಕುರುವ , ಗೋವಿನಕೋವಿ , ಹೊನ್ನಾಳಿ ತಾಲೂಕಿನ ದಿಡಗೂರು ಹರಳಹಳ್ಳಿ, ರಾಂಪುರ , ಹೊಟ್ಯಾಪುರ , ಹಿರೇಬಾಸೂರು ಸುತ್ತಮುತ್ತ ಹೊಳೆ ದಂಡೆ ಮೇಲಿರುವ ಹಲವು ಗ್ರಾಮಸ್ಥರಲ್ಲಿ ಮೊಸಳೆಗಳು ಆತಂಕ ಮೂಡಿಸಿವೆ.
ಮೊಸಳೆಗಳು ಕಾಣಿಸಿಕೊಂಡಿದ್ದು, ಫೆಬ್ರವರಿ 27 ರಂದು ರಾಂಪುರ ಪುಣ್ಯ ಕ್ಷೇತ್ರದ ಶ್ರೀಹಾಲಸ್ವಾಮೀಜಿ ಮಹಾರಥೋತ್ಸವ ನಡೆಯಲಿದ್ದು ಗೋವಿನಕೋವಿ ಗ್ರಾಮದಿಂದ ಹೊಳೆ ದಾಟಿ ಹೋಗಿ ಬರುವ ಭಕ್ತರು ಹಾಗೂ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಸ್ನಾನಕ್ಕೆ ಹೋಗಿದ್ದ ಕೆಲವರಿಗೆ ಸ್ವಲ್ಪ ದೂರದಲ್ಲಿ ಮೊಸಳೆಗಳು ಸಂಚರಿಸುತ್ತಿರುವುದು ಕಾಣಿಸಿದೆ. ಶ್ರೀಹಾಲಸ್ವಾಮೀಜಿ ಮಹಾರಥೋತ್ಸವ ಸಾವಿರಾರು ಭಕ್ತರು ಗೆಡ್ಡೆ ರಾಮೇಶ್ವರದ ದೇಗುಲು , ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ದೇಶ್ವರ ಗವಿಗೆ ಭೇಟಿ ನೀಡುತ್ತಾರೆ. ಹಲವರು ನದಿಯಲ್ಲೇ ಸ್ನಾನ ಮಾಡಿ, ಇಲ್ಲಿನ ದೇಗುಲಗಳಲ್ಲಿ ಪೂಜೆ ನೆರವೇರಿಸುತ್ತಾರೆ. ಸ್ಥಳೀಯರು ನದಿಯಲ್ಲೇ ಬಟ್ಟೆ ತೊಳೆಯುವುದು, ಸ್ನಾನ ಮಾಡುವುದು, ದನಕರುಗಳಿಗೆ ಸ್ನಾನ ಮಾಡಿಸುತ್ತಾರೆ.
ನದಿ ತಟದ ಬಳಿ ಮೊಸಳೆಗಳು ಕಾಣಿಸಿಕೊಂಡಿರುವುದರಿಂದ ಜನರು ಭಯಭೀತರಾಗಿದ್ದಾರೆ. ವಿಷಯ ತಿಳಿದ ನಂತರ ಯಾರೂ ನದಿಗೆ ಇಳಿದಿಲ್ಲ. ಮೊಸಳೆ ಕಾಣಿಸಿಕೊಂಡಿರುವ ಹಿನ್ನೆಲೆ ಸ್ನಾನಕ್ಕೆ ಬರುವವರು, ಮೀನುಗಾರಿಕೆ, ದನಗಳ ಮೈ ತೊಳೆಯುವುದು, ವಾಹನಗಳನ್ನು ಸ್ವಚ್ಛಗೊಳಿಸುವುದು, ಬಟ್ಟೆ ಒಗೆಯಲು ಬರುವವರು ಹೊಳೆಗೆ ಇಳಿಯುವಾಗ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಅರಣ್ಯ ಇಲಾಖೆಯ ಬರಕತ್ಅಲಿ ಸಲಹೆ ನೀಡಿದ್ದಾರೆ.