ಮುಚ್ಚಿದ ನ್ಯಾಯಾಲಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ
ದಾವಣಗೆರೆ : ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ಮುಚ್ಚಿದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಕಾರಣ ಯಾವುದೇ ಮಕ್ಕಳಾಗಲಿ, ಪೋಷಕರಾಗಲಿ, ಇನ್ನಿತರ ಅಧಿಕಾರಿಗಳಾಗಲಿ ಯಾವುದೇ ಹಿಂಜರಿಕೆ, ಭಯ, ಇಲ್ಲದೆ ಲೈಂಗಿಕ ದೌರ್ಜನ್ಯಗಳ ವಿರುದ್ಧ ದೂರು ನೀಡಬೇಕು ಎಂದು ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ಶ್ರೀಪಾದ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಾವಣಗೆರೆ, ಜಿಲ್ಲಾ ವಕೀಲರ ಸಂಘ, ದಾವಣಗೆರೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ದಾವಣಗೆರೆ ದಕ್ಷಿಣ ವಲಯ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಗುರುಭವನದಲ್ಲಿ ಆಯೋಜಿಸಲಾಗಿದ್ದ ಪೋಕ್ಸ್ ಕಾನೂನಿನ ಅರಿವು ಬಾಲ್ಯವಿವಾಹ ತಡೆ, ಬಾಲಕಾರ್ಮಿಕ, ಮಾದಕ ವಸ್ತುಗಳ ಸೇವನೆಯಿಂದ ಆಗುವ ಹಾನಿ ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ತಾಲ್ಲೂಕು ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಲೈಂಗಿಕ ದೌರ್ಜನ್ಯದ ಅಪರಾಧಗಳೆಂದರೆ ಕೇವಲ ಬಾಲಕಿಯರ ಮೇಲಷ್ಟೇ ಅಲ್ಲ. 18 ವರ್ಷದೊಳಗಿನ ಬಾಲಕ ಬಾಲಕಿಯರ ಎನ್ನದೆ ಲಿಂಗ ಭೇದವಿಲ್ಲದೆ ಯಾವುದೇ ಮಕ್ಕಳ ಮೇಲೆ ನಡೆಯುವ ಎಲ್ಲಾ ಪ್ರಕರಣಗಳನ್ನು ಲೈಂಗಿಕ ಅತ್ಯಾಚಾರ ಪ್ರಕರಣಗಳೆಂದು ಹೇಳಬಹುದು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಲೆಯ ಮತ್ತು ಕಾಲೇಜುಗಳ ಶಿಕ್ಷಕರು ಮತ್ತು ಪ್ರಾಧ್ಯಾಪಕರು ಈ ನಿಟ್ಟಿನಲ್ಲಿ ಮಕ್ಕಳ ಮೇಲೆ ಸದಾ ಕಾಳಜಿ ವಹಿಸುವ ಮೂಲಕ ಅವರ ಚಲನ ವಲನಗಳನ್ನು ಗಮನಿಸಬೇಕು ಎಂದು ಕಿವಿಮಾತು ಹೇಳಿದರು.
ಲೈಂಗಿಕ ಅತ್ಯಾಚಾರಗಳು ಕೇವಲ ಅಪರಿಚಿತರಂದಲೇ ಆಗುತ್ತವೆ ಎನ್ನುವುದು ಸಹಜ. ಅದೆಷ್ಟೋ ಪ್ರಕರಣಗಳು ಪೋಷಕರಿಂದ, ಶಿಕ್ಷಕರಿಂದ, ನೆರೆಹೊರೆಯವರಿಂದ ಮತ್ತು ಸಂಬಂಧಿಕರಿಂದಲೇ ಇತ್ತೀಚಿನ ದಿನಗಳಲ್ಲಿ ಲೈಂಗಿಕ ಪ್ರಕರಣಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ಯಾವುದೇ ಮುಚ್ಚುಮರೆ ಇಲ್ಲದೆ ಸಂತ್ರಸ್ತರು ತಮ್ಮ ದೂರುಗಳನ್ನು ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಅಥವಾ ನ್ಯಾಯಕ್ಕೆ ನೀಡಿದಾಗ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡುವಲ್ಲಿ ನ್ಯಾಯಾಲಯ ಮುಂದಾಗಲಿದೆ ಅಲ್ಲದೆ ಸಂತ್ರಸ್ತರಿಗೆ ಪರಿಹಾರ ನೀಡಲಿದೆ ಎಂದು ಹೇಳಿದರು.
ಯಾವುದೇ ಸ್ಥಳದಲ್ಲಾಗಲಿ ಲೈಂಗಿಕ ದೌರ್ಜನ್ಯಗಳು ನಡೆದಾಗ ಅದನ್ನು ನೋಡಿದ ಅಥವಾ ಅದರ ಬಗ್ಗೆ ತಿಳಿದಿದ್ದರೂ ಸಹ ಅದರ ಬಗ್ಗೆ ಹೇಳದವರೂ ಸಹ ಆರೋಪಿಗಳ ಸ್ಥಾನದಲ್ಲಿ ನಿಲ್ಲುತ್ತಾರೆ. ಸಾರ್ವಜನಿಕರಾಗಲಿ ಅಥವಾ ಇನ್ನಿತರೆ ಯಾವುದೇ ಕ್ಷೇತ್ರದ ವ್ಯಕ್ತಿಗಳಾಗಲಿ ಇಂತಹ ಕೃತ್ಯ ಕಂಡು ಬಂದಾಗ ತಕ್ಷಣವೇ ಸಂಬಂಧಪಟ್ಟ ಪ್ರಾಧಿಕಾರಕ್ಕೆ ತಿಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ದೇಶಕ್ಕೆ ಸ್ವತಂತ್ರ ಬಂದು 77 ವರ್ಷಗಳು ಕಳೆದಿವೆ. ನಾವುಗಳು ಸಂವಿಧಾನವನ್ನು ಒಪ್ಪಿಕೊಂಡು ಅದರ ಅಡಿಯಲ್ಲಿ ಬಾಳುತ್ತಿದ್ದೇವೆ. ಅನೇಕ ಕಾನೂನುಗಳು ಇವೆ. ಎಲ್ಲಾ ಕಾನೂನುಗಳ ತಾಯಿ ನಮ್ಮ ಸಂವಿಧಾನ. ಸಮಾನತೆ, ಸಹಬಾಳ್ವೆ, ಸಮಾಜದ ಅಭಿವೃದ್ಧಿಗೆ ಹಲವು ಕಾನೂನುಗಳನ್ನು ನಮ್ಮ ಸಂವಿಧಾನ ರಚಿಸಿದೆ. ಆದರೆ ಇಂದಿಗೂ ಮಹಿಳೆಯರು ಮತ್ತು ಮಕ್ಕಳ ಮೇಲೆ ಶೋಷಣೆ ನಡೆಯುತ್ತಿವೆ. ಹಲವಾರು ಸಮಸ್ಯೆಗಳು ಈಗಲೂ ನಮ್ಮ ಮುಂದೆ ಇವೆ. ಸಮಾನತೆಯ ಯುಗ ಬಂದಿದ್ದರೂ ಸಹ ಹಿಂದಿನಷ್ಟು ಶೋಷಣೆ ಈಗ ಕಾಣುತ್ತಿಲ್ಲ ಎಂದು ಹೇಳಿದರು.
ಸಾರ್ವಜನಿಕರಲ್ಲಿ ಕಾನೂನಿನ ಅರಿವಿನ ಬಗ್ಗೆ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆ ಮುಂದಾಗಬೇಕಾಗಿದೆ. ಎಲ್ಲಾ ಹಂತದ ವ್ಯಕ್ತಿಗಳ ನಿರ್ಮಾಣದಲ್ಲಿ ಶಿಕ್ಷಣ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ. ಕಾರಣ ಸಮಾಜವನ್ನು ತಿದ್ದುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಶಿಕ್ಷಣ ಇಲಾಖೆ ನೀಡಬೇಕಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್ ಆಗಮಿಸಿದ್ದರು. ಡಿಡಿಪಿಐ ಜಿ.ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ.ಕರೆಣ್ಣವರ, ಬಿಇಓ ಡಾ.ಪುಷ್ಪಾಲತ, ಕ್ಷೇತ್ರ ಸಮನ್ವಯ ಅಧಿಕಾರಿ ಬಿ.ಎಂ.ಚೌಡಪ್ಪ ಇತರರು ಇದ್ದರು.