DNA Test; ಮದುವೆ-ಮಕ್ಕಳ ಆರೋಪಕ್ಕೆ ಡಿಎನ್‌ಎ ಟೆಸ್ಟ್ ಮಾಡಿಸಿ: ವಾಲ್ಮೀಕಿ ಸ್ವಾಮೀಜಿ
ದಾವಣಗೆರೆ, ಅ.02: ಹರಿಹರ ಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗೆ ನಾನೇ ಡಿಎನ್‌ಎ ಟೆಸ್ಟ್ (DNA Test) ಮಾಡಿಸಿ ಎಂದು ಹೇಳಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ರಾಜನಹಳ್ಳಿ ಪೀಠದಲ್ಲಿ ಪೀಠಾಧ್ಯಕ್ಷರು, ಧರ್ಮದರ್ಶಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕೆಲವರು ಮಾಡುತ್ತಿರುವ ಆರೋಪಗಳಿಗೆ ಸ್ಪಷ್ಟೀಕರಣ ಕೊಡುವುದಕ್ಕಾಗಿ ನಡೆದ ರಾಜ್ಯ ಮಟ್ಟದ ಮಹತ್ವದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಾಲ್ಮೀಕಿ ಸ್ವಾಮೀಜಿಯವರ ಜಾತಿ ಯಾವುದೆಂಬ ಬಗ್ಗೆ ಸರಕಾರವೇ ಪ್ರಮಾಣಪತ್ರ ನೀಡಿರುವ ಕಾರಣ ಆ ಬಗ್ಗೆ ಚರ್ಚಿಸಲ್ಲ. ಸ್ವಾಮೀಜಿಗೆ ಮದುವೆಯಾಗಿದೆ, ಮಕ್ಕಳಿದ್ದಾರೆ ಎಂಬ ಆರೋಪ ಶುದ್ಧ ಸುಳ್ಳು. ಈ ಬಗ್ಗೆ ಡಿಎನ್‌ಎ ಪರೀಕ್ಷೆಗೆ ಸಿದ್ಧರಿರುವುದಾಗಿ ಸ್ವತಃ ಸ್ವಾಮೀಜಿ ಹೇಳಿದ್ದಾರೆ. ಶ್ರೀಗಳ ವಿರುದ್ಧ ಮಾಡುತ್ತಿರುವ ಆರೋಪಗಳ ಬಗ್ಗೆ ದೂರು ನೀಡಲು ಯಾರಾದರೂ ಮುಂದೆ ಬಂದರೆ ತನಿಖೆ ನಡೆಸಲಾಗುವುದು. ಸಮಾಜದಲ್ಲಿ ಜಾಗೃತಿ ಮೂಡಿಸುವ ಬದಲು ಶ್ರೀಗಳ ವಿರುದ್ಧ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಕನಸು – ಬಿಜೆಪಿ ಟಿಕೇಟ್ ಪ್ರಬಲ ಆಕಾಂಕ್ಷಿ: ಕೆ.ಬಿ.ಕೊಟ್ರೇಶ್
ಸಮಾಜದಲ್ಲಿ ವಾತಾವರಣ ಕೆಡಿಸುವವರ ವಿರುದ್ಧ ಕೇಸ್ ಹಾಕಿ. ಸ್ವಾಮೀಜಿ ಬಳಿ ಮಾನಹಾನಿ ಕೇಸ್ ಹಾಕಲು ಎಲ್ಲ ರೀತಿಯ ದಾಖಲೆಗಳು ಲಭ್ಯವಿದೆ. ಸ್ವಾಮೀಜಿ ಮದುವೆ ಆಗಿದ್ದಾರೆ ಅವರಿಗೆ ಮಗು ಇದೆ ಎಂಬ ಆರೋಪ ಬಂದಿದೆ. ಆದ್ದರಿಂದ ಸ್ವಾಮೀಜಿಗಳಿಗೆ ಡಿ ಎನ್‌ಎ ಟೆಸ್ಟ್ ಮಾಡಿಸಿ ಎಂದು ನಾನೇ ಹೇಳಿದ್ದೆನೆ. ಡಿಎನ್‌ಎ ಬಗ್ಗೆ ಮೂರು ನಾಲ್ಕು ತಿಂಗಳಲ್ಲಿ ಇದನ್ನ ಬಗೆಹರಿಸಲು ಪ್ರಯತ್ನಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.
ವಾಲ್ಮೀಕಿಗಳು ಆಫ್ರಿಕಾದಿಂದ ಬಂದವರು ಎಂದು ಬಿ ಎಲ್ ಸಂತೋಷ್ ಹೇಳಿದ್ದರು ಅದರ ಬಗ್ಗೆ ಚರ್ಚೆ ಆಗಲಿ ಎಂದ ಸಚಿವ ಸತೀಶ್ ಜಾರಕಿಹೊಳಿ, ವಾಲ್ಮೀಕಿ ಸಮಾಜ ಮುಂದುವರಿಯುವ ಸಂದರ್ಭದಲ್ಲಿ ಇಂತಹ ಪರಿಸ್ಥಿತಿಯಿಂದ ಬೇರೆ ಸಮಾಜದವರು ನಗುವಂತಾಗಿದೆ. ಇಂತಹ ಬೆಳವಣಿಗೆ ಇಲ್ಲಿಗೆ ನಿಲ್ಲಿಸಿದರೆ ಒಳಿತು ಎಂದು ಸಮಾಜದವರಿಗೆ ಸಚಿವ ಸತೀಶ್ ಜಾರಕಿಹೊಳಿ ಕೈ ಮುಗಿದು ಕೇಳಿಕೊಂಡರು.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ನನ್ನ ಮೇಲಿರುವ ಆರೋಪಗಳ ಬಗ್ಗೆ ಸಭೆಯಲ್ಲಿ ಸ್ಪಷ್ಟನೆ ನೀಡುತ್ತೇನೆ. ನನ್ನ ಮದುವೆ ಬಗ್ಗೆ ಯಾರಾದರೂ ಪುರಾವೆ ನೀಡಿದ್ರೆ ಟ್ರಸ್ಟ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದ. ಡಿಎನ್‌ಎ ಪರೀಕ್ಷೆಗೆ ನಾನು ಒಳಗಾಗಲು ಸಿದ್ದ. ಕೆಲವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಮದುವೆ ಆಗಿದೆ, ಮಕ್ಕಳೂ ಇದ್ದಾರೆ ಎಂಬ ಆರೋಪ ಸುಳ್ಳುಘಿ. ಈ ಬಗ್ಗೆ ಭಕ್ತರಿಗೆ ಸಂಶಯವಿದ್ದರೆ ಡಿಎನ್‌ಎ ಪರೀಕ್ಷೆಗೆ ಒಳಪಡಲು ನಾವು ಸಿದ್ಧರಿದ್ದೇವೆ. ಯಾರೇ ಕರೆದರೂ ಯಾವ ಆಸ್ಪತ್ರೆಗೆ ಕರೆದರೂ ಬರುತ್ತೇನೆ. ವಾಲ್ಮೀಕಿ ಜಾತ್ರೆಗೆ ಧರ್ಮಗುರುಗಳನ್ನು ಆಹ್ವಾನಿಸುವಾಗ ಕೆಲವರು ಸಂಸಾರಸ್ಥ ಸ್ವಾಮೀಜಿ ಒಬ್ಬರನ್ನು ಆಹ್ವಾನಿಸಲು ತಿಳಿಸಿದರು. ಅದನ್ನು ನಿರಾಕರಿಸಿದ್ದಕ್ಕೆ ಆ ಸ್ವಾಮೀಜಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿ, ನಮಗೆ ಮದುವೆಯಾಗಿದೆ, ಮಕ್ಕಳಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ವೈರಲ್ ವಿಡಿಯೋ:
‘ಮಠದಲ್ಲಿ ಅನ್ಯ ಜಾತಿಯವರಿಗೆ ಆಶ್ರಯ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ಧಗಂಗಾ ಮಠ, ಸುತ್ತೂರು ಮಠ, ಮುರುಘಾಮಠ, ಮೂರು ಸಾವಿರ ಮಠ ಸೇರಿ ರಾಜ್ಯದ ಹಲವಾರು ಮಠಗಳಲ್ಲಿ ಬೇರೆ ಜಾತಿಯ ನೌಕರರು, ಕೆಲಸಗಾರರಿದ್ದಾರೆ. ನನ್ನ ವಾಹನ ಚಾಲಕ ಬೇರೆ ಜಾತಿಗೆ ಸೇರಿದ್ದು, ಒಮ್ಮೆ ಆತ ತಪ್ಪು ಮಾಡಿದ್ದಾಗ ನಮ್ಮ ಆಡುಭಾಷೆಯಲ್ಲಿ ಬೈದಾಡಿದ್ದೆ. ಆದರೆ ಆ ಆಡಿಯೋವನ್ನು ಜಾಲತಾಣದಲ್ಲಿ ವೈರಲ್ ಮಾಡಿ ನಮ್ಮ ತೇಜೋವಧೆ ಮಾಡಲಾಯಿತು. ಚಾಲಕ ಸಹ ಅವರೊಂದಿಗೆ ಕೈಜೋಡಿಸಿದ್ದ. ನಂತರ ಕ್ಷಮೆ ಕೇಳಿದ,’’ ಎಂದರು.