ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ವಿಧಿವಶ

ನಿರ್ದೇಶಕ ಭಗವಾನ್ ವಿಧಿವಶ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಇಹಲೋಕ ತ್ಯಜಿಸಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು.
90 ವರ್ಷ ವಯಸ್ಸಿನ ಅವರು ಸುಮಾರು ಎರಡು ತಿಂಗಳಿನಿಂದ ವಯೋಸಹಜ ಖಾಯಿಲೆಯಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಖ್ಯಾತ ನಿರ್ದೇಶಕರಾದ ದೊರೈರಾಜ್ ಮತ್ತು ಭಗವಾನ್ ಜೋಡಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದುದು ವಿಶೇಷ. ಇವರಿಬ್ಬರು ಜೊತೆಯಾಟದಿಂದಾಗಿ ದೊರೈ-ಭಗವಾನ್ ಎಂದೇ ಗುರುತಾಗಿದ್ದರು. ಇವರಿಬ್ಬರು ಒಟ್ಟಿಗೆ ಇಪ್ಪತ್ತೇಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ, ಅಷ್ಟೇಅಲ್ಲ, ಡಾ.ರಾಜ್ ಕುಮಾರ್ ಅವರ ಅಭಿನಯದ 30ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಭಗವಾನ್, ಕನ್ನಡ ಸಿನಿಮಾ ಲೋಕಕ್ಕೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದರು.
1956ರಲ್ಲಿ ‘ಭಾಗ್ಯೋದಯ’ ಚಿತ್ರದ ಮೂಲಕ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಸಹಾಯಕರಾಗಿ ಸಿನಿ ಲೋಕಕ್ಕೆ ಹೆಜ್ಜೆ ಇಟ್ಟ ಭಗವಾನ್ ಅವರು, 1996ರಲ್ಲಿ ‘ಸಂಧ್ಯಾರಾಗ’ ಎಂಬ ಚಿತ್ರವನ್ನು ನಿರ್ದೇಶಿಸಿದರು. ಅನಂತರ ‘ರಾಜದುರ್ಗದ ರಹಸ್ಯ’ ಚಿತ್ರವನ್ನು ಸ್ವತಂತ್ರವಾಗಿ ನಿರ್ದೇಶಿಸಿದರು. ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯ ಚಲನಚಿತ್ರಗಳನ್ನು ಮಾಡಿದ ಮೊದಲ ನಿರ್ದೇಶಕ ಭಗವಾನ್ ಆಗಿದ್ದಾರೆ. ‘ಜೇಡರ ಬಲೆ’, ‘ಕಸ್ತೂರಿ ನಿವಾಸ, ‘ಬಯಲುದಾರಿ’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, , ‘ಜೀವನ ಚೈತ್ರ’ ಸಹಿತ ಅನೇಕ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಭಗವಾನ್ ಅವರಿಗೆ ಹಲವಾರು ಪ್ರಶಸ್ತಿಗಳು ಹುಡುಕಿ ಬಂದಿದ್ದವು. ಈ ಪ್ರತಿಭಾನ್ವಿತ ನಿರ್ದೇಶಕ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದರು.
ಭಗವಾನ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *

error: Content is protected !!