ನೀತಿ ಸಂಹಿತೆ ಉಲ್ಲಂಘಟನೆ: ಪಿ.ಟಿ. ಪರಮೇಶ್ವರನಾಯ್ಕ ಬೆಂಬಲಿಗರ 25 ಬೈಕುಗಳ ವಶ

ನೀತಿ ಸಂಹಿತೆ ಉಲ್ಲಂಘಟನೆ: ಪಿ.ಟಿ. ಪರಮೇಶ್ವರನಾಯ್ಕ ಬೆಂಬಲಿಗರ 25 ಬೈಕುಗಳ ವಶ

ಹೂವಿನಹಡಗಲಿ : ಕಾಂಗ್ರೆಸ್‌ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಬೆಂಬಲಿಗರು ಶುಕ್ರವಾರ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯನ್ನು ಪೊಲೀಸರು ತಡೆದು 25 ಮೋಟಾರ್ ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಅನುಮತಿ ಪಡೆಯದೆ ರ್ಯಾಲಿ ಹಮ್ಮಿಕೊಂಡಿದ್ದರಿಂದ ಶಾಸಕ ಪರಮೇಶ್ವರ ನಾಯ್ಕ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಗಿ ಕೊಟ್ರೇಶ್ ವಿರುದ್ಧ ಪಟ್ಟಣ ಠಾಣೆಯಲ್ಲಿ ನೀತಿ ಸಂಹಿತಿ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಬಿ. ಫಾರಂನೊಂದಿಗೆ ಕ್ಷೇತ್ರಕ್ಕೆ ಆಗಮಿಸುತ್ತಿದ್ದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರನ್ನು ಪಕ್ಷದ ಕಾರ್ಯಕರ್ತರು, ಬೆಂಬಲಿಗರು ತಾಲ್ಲೂಕಿನ ಕೊಮಾರನಹಳ್ಳಿ ತಾಂಡಾದ ಗಡಿಯಲ್ಲಿ ಸ್ವಾಗತಿಸಿ, ಅಲ್ಲಿಂದ ಶಾಸಕರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡುತ್ತಾ ಬೈಕ್ ರ್‍ಯಾಲಿಯಲ್ಲಿ ಪಟ್ಟಣಕ್ಕೆ ಕರೆ ತರುತ್ತಿದ್ದರು. ಕೆಲವರು ರ್‍ಯಾಲಿಯ ವಿಡಿಯೊವನ್ನು ಜಾಲತಾಣದಲ್ಲಿ ನೇರಪ್ರಸಾರ ಮಾಡಿದ್ದನ್ನು ಗಮನಿಸಿ ಅಧಿಕಾರಿಗಳು ಕಾರ್ಯಪ್ರವೃತ್ತರಾದರು.
ಡಿವೈಎಸ್ಪಿ ಹಾಲಮೂರ್ತಿರಾವ್ ನೇತೃತ್ವದ ಅಧಿಕಾರಿಗಳ ತಂಡ ಪಟ್ಟಣದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಕಚೇರಿ ಬಳಿ ಶಾಸಕರ ರ್‍ಯಾಲಿ ತಡೆದು, ಮೋಟಾರ್ ಬೈಕ್ ವಶಪಡಿಸಿಕೊಂಡರು. ಕೆಲವು ಕಾರ್ಯಕರ್ತರು ಒಳದಾರಿಗಳ ಮೂಲಕ ತಪ್ಪಿಸಿಕೊಂಡರು. ಈ ವೇಳೆ ಶಾಸಕರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ‘ನೀವು ಶಾಸಕರಾಗಿ ಕಾನೂನು ಪಾಲಿಸುವುದರಲ್ಲಿ ಮಾದರಿಯಾಗಿರಬೇಕು. ಅನುಮತಿ ಪಡೆಯದೆ ರ್‍ಯಾಲಿ ನಡೆಸಿ ನೀತಿ ಸಂಹಿತಿ ಉಲ್ಲಂಘಿಸಿದ್ದೀರಿ. ರ್ಯಾಲಿಯನ್ನು ಇಲ್ಲೇ ಸ್ಥಗಿತಗೊಳಿಸಿ’ ಎಂದು ಡಿವೈಎಸ್ಪಿ ಹಾಲಮೂರ್ತಿರಾವ್ ಹೇಳಿದರು.
ರ್ಯಾಲಿನಡೆಸಿ ಎಂದು ಯಾರನ್ನೂ ಕರೆದಿಲ್ಲ. ನನ್ನ ಮೇಲಿನ ಪ್ರೀತಿ, ಅಭಿಮಾನಕ್ಕಾಗಿ ಬೆಂಬಲಿಗರು ಬೈಕ್ ನಲ್ಲಿ ಬಂದು ಕ್ಷೇತ್ರದ ಗಡಿಯಲ್ಲಿ ಸ್ವಾಗತಿಸಿದ್ದಾರೆ. ಬೈಕ್ ರ್‍ಯಾಲಿ ನಡೆಸುವ ಉದ್ದೇಶವಿದ್ದಿದ್ದರೆ ಅನುಮತಿ ಪಡೆಯುತ್ತಿದ್ದೆವು. ಬೆಂಬಲಿಗರಿಂದ ಏನೋ ಆಚಾತುರ್ಯ ಆಗಿರಬಹುದು, ವಶಕ್ಕೆ ಪಡೆದಿರುವ ಬೈಕ್ ಗಳನ್ನು ವಾಪಸ್ ಕೊಡಿ’ ಎಂದು ಶಾಸಕ ಪರಮೇಶ್ವರ ನಾಯ್ಕ ಹೇಳಿದರು.
ನಂತರ ಬೆಂಬಲಿಗರು ರ್ಯಾರಿ ಮೊಟಕುಗೊಳಿಸಿ ಶಾಸಕರನ್ನು ತೆರೆದ ವಾಹನದಲ್ಲಿ ಕರೆ ತಂದರು. ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತಗಳಲ್ಲಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಶಾಸಕರು ಮನೆಗೆ ತೆರಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಮುಖಂಡರಾದ ಅರವಳ್ಳಿ ವೀರಣ್ಣ, ಹನಕನಹಳ್ಳಿ ಹಾಲೇಶ, ಜಿ.ವಸಂತ ಇತರರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!