ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ : ಚನ್ನಗಿರಿಯಲ್ಲಿ 25 ಪ್ರಕರಣ ದಾಖಲು
ದಾವಣಗೆರೆ: ಚನ್ನಗಿರಿ ಪಟ್ಟಣದಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘಿಸಿದ 25 ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿ ದಂಡ ರೂಪವಾಗಿ ರೂ.3,300 ಸಂಗ್ರಹಿಸಲಾಗಿದೆ.
ಗುರುವಾರ ಮುಂಜಾನೆ ಚನ್ನಗಿರಿಯ ವಿವಿಧ ಹೋಟೆಲ್, ಬೇಕರಿ, ರೆಸ್ಟೋರೆಂಟ್ಗಳ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ ಕೋಟ್ಪಾ ಕಾಯ್ದೆ-2003 ಕಾಯ್ದೆಯ ಅನುಸಾರ ಪ್ರಕರಣ ದಾಖಲಿಸಿ ದಂಡ ವಿಧಿಸಿ ನಿಯಮ ಪಾಲನೆ ಕುರಿತಂತೆ ಮಾರ್ಗದರ್ಶನ ಮಾಡಿದರು. ನಿಯಮ 04ರನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧ ಎಂಬ ಫಲಕ ಹಾಕುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಲೋಕೇಶ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಎಂ.ವಿ.ಹೊರಕೇರಿ, ಆಹಾರ ಸುರಕ್ಷತಾ ಅಧಿಕಾರಿ ಕೊಟ್ರೇಶಪ್ಪ.ಹೆಚ್, ಎನ್ಟಿಸಿಪಿ ಸಮಾಜ ಕಾರ್ಯಕರ್ತ ದೇವರಾಜ.ಕೆ.ಪಿ., ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಮಪ್ಪ, ನಿರೀಕ್ಷಣಾಧಿಕಾರಿ ಶಿವರುದ್ರಪ್ಪ, ಪೊಲೀಸ್ ಸಿಬ್ಬಂದಿ ರಮೇಶ್ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.