ಏಕಾಏಕಿ ಕೆಲಸದಿಂದ ವಜಾಗೊಳಿಸುವುದ್ದನ್ನು ಖಂಡಿಸಿ ವಿಶಾಲ್ ಮೆಗಾ ಮಾರ್ಟ್ ನೌಕರರಿಂದ ಪ್ರತಿಭಟನೆ
ದಾವಣಗೆರೆ: ನಗರದ ಹದಡಿ ರಸ್ತೆಯಲ್ಲಿರುವ ವಿಶಾಲ್ ಮೆಗಾ ಮಾರ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರಲ್ಲಿ ಮೂರು ಜನ ಹೌಸ್ ಕೀಪಿಂಗ್ ಕಾರ್ಮಿಕರನ್ನು ಸಕಾರಣ ನೀಡದೆ ಏಕಾಏಕಿ ಕೆಲಸದಿಂದ ವಜಗೊಳಿಸಿದ್ದನ್ನು ಖಂಡಿಸಿ ಎಐಟಿಯುಸಿ ಸಹಯೋಗದಲ್ಲಿ ವಿಶಾಲ್ ಮೆಗಾ ಮಾರ್ಟ್ ನೌಕರರ ಸಂಘದ ವತಿಯಿಂದ ಇಂದು ಪ್ರತಿಭಟಿಸಲಾಯಿತು.
ಕಾರ್ಮಿಕರನ್ನು ತಕ್ಷಣವೇ ಕೆಲಸಕ್ಕೆ ತೆಗೆದುಕೊಳ್ಳುವುದರೊಂದಿಗೆ, ಅವರಿಗೆ ಇಎಸ್ಐ, ಪಿಎಫ್, ರಜೆ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿ ವಿಶಾಲ್ ಮೆಗಾ ಮಾರ್ಟ್ ಮುಂದೆ ಪ್ರತಿಭಟಿಸಿದರು.
ಪ್ರತಿಭಟನೆಗೆ ಮಣಿದ ಮಾಲೀಕರು ಕೂಡಲೇ ಕಾರ್ಮಿಕರನ್ನು ಪುನಃ ಕೆಲಸಕ್ಕೆ ಹಾಜರಾಗುವಂತೆ ಕೋರಿ ಇಎಸ್ಐ, ಪಿಎಫ್ ಹಾಗೂ ರಜೆಯ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದೆಂದು ಭರವಸೆ ನೀಡಿದ್ದು, ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಮಂಜುನಾಥ್ ಕೈದಾಳೆ, ಕಾರ್ಯದರ್ಶಿ ಮಂಜುನಾಥ್ ಕುಕ್ಕವಾಡ, ಸದಸ್ಯರುಗಳಾದ ತಿಪ್ಪೇಸ್ವಾಮಿ ಅಣಬೇರು, ಬಸವರಾಜ್ ಶಾವಿ, ಶಿವಾಜಿರಾವ್, ಪ್ರಕಾಶ್ ಎಲ್.ಹೆಚ್. ಸೇರಿದಂತೆ ಮುಂತಾದ ಸದಸ್ಯರುಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.