ಉಡುಪಿ: ಬೀದಿ ನಾಯಿಗೆ ಊಟ ಹಾಕಿದ್ದಕ್ಕೆ ಮಹಿಳೆಗೆ ಹಲ್ಲೆ|ಆರೋಪಿ ಬಂಧನ

ಬೀದಿನಾಯಿಗೆ ಊಟ ಹಾಕಿದ್ದಕ್ಕೆ ದಲಿತ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಇಂದ್ರಾಳಿ ಹಯಗ್ರೀವ ನಗರದ ಚಂದ್ರಕಾಂತ ಭಟ್ ಎಂಬಾತನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಕುಂಜಿಬೆಟ್ಟು ಬುಡ್ನಾರ್ ನಿವಾಸಿ ಬೇಬಿ(50) ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ತಮ್ಮ ಪರಿಚಯದ ಚಂದ್ರಕಾಂತ ಎಂಬವರ ಮನೆ ಸಮೀಪ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದರು. ಈ ವೇಳೆ ಚಂದ್ರಕಾಂತ ನಾಯಿಗಳಿಗೆ ಊಟ ಹಾಕುವುದಕ್ಕೆ ಆಕ್ಷೇಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮರದ ತುಂಡಿನಿಂದ ಬೇಬಿ ಅವರ ತಲೆಗೆ ಹೊಡೆದಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.