Yadgiri Murder Protest: ಆತ್ಯಾಚಾರಕ್ಕೆ ಪ್ರತಿರೋಧ.! ಬೆಂಕಿ ಹಚ್ಚಿ ಮಹಿಳೆ ಕೊಲೆ ಪ್ರಕರಣ – ಡಿ ಎಸ್ ಎಸ್ ಪ್ರತಿಭಟನೆ

ದಾವಣಗೆರೆ: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಚೌಡೇಶ್ವರಿ ಹಾಳ ಗ್ರಾಮದಲ್ಲಿ ದಲಿತ ಮಹಿಳೆ ಆತ್ಯಾಚಾರಕ್ಕೆ ಪ್ರತಿರೋಧಿಸಿದಾಗ ಪೆಟ್ರೋಲ್ ಸುರಿದು ಸುಟ್ಟು ಕೊಲೆ ಮಾಡಿದ್ದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾವಣಗೆರೆ ಜಿಲ್ಲಾ ಘಟಕ ದಾವಣಗೆರೆ ಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಡಿಎಸ್‌ಎಸ್, ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಮುಖಾಂತರ ರಾಜ್ಯದ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕಳೆದ 4 ರಂದು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಚೌಡೇಶ್ವರಿ ಹಾಳ್ ಗ್ರಾಮದಲ್ಲಿ ದಲಿತ ಮಹಿಳೆ ಪಾಲಮ್ಮ ಮರೆಪ್ಪಳನ್ನು ಅತ್ಯಾಚಾರವೆಸಗಲು ಯತ್ನಿಸಿದಾಗ ಅದಕ್ಕೆ ನಿರಾಕರಿಸಿದಾಗ ಗಂಗಪ್ಪ ಅಳ್ಳಳ್ಳಿ ಎಂಬಾತ ತನ್ನ ಬೈಕಿನಲ್ಲಿ ಪೆಟ್ರೋಲ್ ತೆಗೆದು ಆಕೆಯ ಮೈ ಮೇಲೆ ಸುರಿದು ಸುಟ್ಟು ಹಾಕಿ ಕೊಲೆ ಮಾಡಿ ತನ್ನ ವಿಕೃತಿ ಮರೆದಿದ್ದಾನೆ. ಅತ್ಯಾಚಾರಿ ಕೊಲೆಗಡುಕ ಗಂಗಪ್ಪ ವಿವಾಹಿತನಾಗಿದ್ದರೂ ಪಾಲಮ್ಮನಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಇಂತಹ ಪೈಶಾಚಿಕ ಕೃತ್ಯಗಳು ಹೆಚ್ಚಾಗುತ್ತಿದ್ದು, ದಲಿತರಿಗೆ ರಕ್ಷಣೆ ನೀಡಬೇಕಾದ ಸಮಾಜ ಕಲ್ಯಾಣ ಇಲಾಖೆ, ತಹಶೀಲ್ದಾರರು ಪೊಲೀಸ್ ಇಲಾಖೆ , ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟಗಳ ( ದೌರ್ಜನ್ಯ ಪ್ರತಿಬಂಧ ) ಅಧಿನಿಯಮ ಇದ್ದರೂ ಜಾಗೃತಿ ಅರಿವು ನೀಡುವಲ್ಲಿ ಸಂಪೂರ್ಣ ವಿಫಲಗೊಂಡಿದ್ದು, ಈ ರೀತಿಯ ದೌರ್ಜನ್ಯಕ್ಕೆ ಕಾರಣ, ದಲಿತರ ರಕ್ಷಣೆ ಕಾಯ್ದೆ ಕಾನೂನು ಪುಸ್ತಕದಲ್ಲಿ ಮಾತ್ರ ಇದೆ. ಪರಿಪೂರ್ಣವಾಗಿ ಜಾರಿಗೊಳಿಸುವಲ್ಲಿ ಸರಕಾರಗಳು ವಿಫಲಗೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಈ ರೀತಿ ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ಸರ್ಕಾರ ರಕ್ಷಣೆ ನೀಡಬೇಕು. 50 ಲಕ್ಷ ಪರಿಹಾರ ನೀಡಬೇಕು. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಆಗುವವರೆಗೂ ಆರೋಪಿತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಅವರ ಬೆಂಬಲಿತರನ್ನು ಬಂದಿಸಬೇಕು. ಆರೋಪಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕುಂದುವಾಡ ಮಂಜುನಾಥ್,ಜಿಗಳಿ ಹಾಲೇಶ್, ಮಂಜು ಕುಂದುವಾಡ, ಪರಮೇಶ್ ಪುರದಾಳ್, ಪ್ರದೀಪ್, ಬಾತಿ ಹೆಚ್.ಸಿ.ಸಿದ್ದೇಶ್, ವಿಜಯಮ್ಮ, ಹಾಲವರ್ತಿ ಮಹಾಂತೇಶ್, ನೀರ್ಥಡಿ ಮಂಜು, ಬೇತೂರು ಹನುಮಂತಪ್ಪ, ದುರುಗಪ್ರಸಾದ, ಅಣಜಿ ಹನುಮಂತಪ್ಪ ಇತರರು ಇದ್ದರು.