ರಾಜಕೀಯ ಪ್ರತಿಷ್ಠೆಗಾಗಿ ಲಾಕ್ದೌನ್ ಬೇಡ:ಜನರ ಸಂಕಷ್ಟಕ್ಕೆ ಸ್ಪಂದಿಸಿ- ಮೊಹಮ್ಮದ್ ಜಿಕ್ರಿಯಾ
ಕೊರೊನ ಮೊದಲನೇ ಅಲೆಯಿಂದ ಇಲ್ಲಿಯವರೆಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ ಜನರ ಜೀವನ ಇನ್ನೂ ಕೂಡ ಸರಿದಾರಿಗೆ ಬಂದೇ ಇಲ್ಲ ಈ ನಡುವೆ ಈಗ ಮತ್ತೊಮ್ಮೆ ತಮ್ಮ ರಾಜಕೀಯ ಪ್ರತಿಷ್ಠೆಗಾಗಿ ಲಾಕ್ದೌನ್ ಮಾಡಲು ಹೊರಟಿರುವುದು ಖಂಡನೀಯವಾಗಿದೆ ಎಂದು ದಾವಣಗೆರೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ಮೊಹಮ್ಮದ್ ಜಿಕ್ರಿಯಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸರ್ಕಾರವು ಈ ಹಿಂದೆ ಇದೇ ರೀತಿ ಅವೈಜ್ಞಾನಿಕವಾಗಿ ಹೇರಿದ ಲಾಕ್ದೌನ್ ನಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿದ್ದು ಈಗಲೂ ಸಹ ಜೀವನ ನಡೆಸುವುದು ಕಷ್ಟವಾಗುತ್ತಿದೆ ಏತನ್ಮಧ್ಯೆ ಸರ್ಕಾರ ಘೋಷಿಸಿರುವ ಯಾವುದೇ ಪರಿಹಾರದ ಹಣ ಇನ್ನೂ ಹಲವಾರು ಕುಟುಂಬಗಳಿಗೆ ತಲುಪಲೇ ಇಲ್ಲ ಅದು ಕೇವಲ ದಾಖಲೆಗಳಲ್ಲೇ ಇದೆ. ಈಗ ಮತ್ತೊಮ್ಮೆ ಲಾಕ್ದೌನ್ ಹೇರುವುದರಿಂದ ದಿನಗೂಲಿ ನೌಕರರು ಹಾಗೂ ಬಡ ಕೂಲಿ ಕಾರ್ಮಿಕರು,ರೈತರ ಜೀವನ ಮತ್ತೊಮ್ಮೆ ಸಂಕಷ್ಟಕ್ಕೀಡಾಗಲಿದ್ದು ಇದಕ್ಕೆಲ್ಲ ಈ ಸರ್ಕಾರವೇ ನೇರ ಹೊಣೆಯಾಗಲಿದೆ.
ಕಳೆದ ಎಂಟು ವರ್ಷಗಳಿಂದ ಸರ್ಕಾರದ ವಿರುಧ್ದ ಯಾರೇ ಪ್ರತಿಭಟನೆ ನಡೆಸಿದರೂ ಅದನ್ನ ಹತ್ತಿಕ್ಕುವ ಕೆಲಸ ಮಾಡಿಕೊಂಡೇ ಬಂದಿದ್ದಾರೆ ಈಗ ಅದೇ ರೀತಿ ರಾಜ್ಯದಲ್ಲಿ ನಡೆಸಲುದ್ದೇಶಿಸಿರುವ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಕೇವಲ ತಮ್ಮ ರಾಜಕೀಯ ಪ್ರತಿಷ್ಠೆಗಾಗಿ ಲಾಕ್ದೌನ್ ಹೇರ ಹೊರಟಿರುವುದು ಈ ಸರ್ಕಾರಕ್ಕೆ ಜನ ಸಾಮಾನ್ಯರ ಮೇಲೆ ಅದೆಷ್ಟು ಕಾಳಜಿ ಇದೆ ಎಂದು ಸಾಬೀತು ಪಡಿಸುತ್ತಿದೆ ಎಂದು ತಮ್ಮಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಈ ಬಾರಿ ಲಾಕ್ದೌನ್ ಹೇರುವ ಮುನ್ನ ಎಲ್ಲಾ ಪರಿಹಾರಕಾರ್ಯವನ್ನು ಮುಂಚಿತವಾಗಿ ಘೋಷಣೆ ಮಾಡಬೇಕು,ಹಾಗೂ ಮುನ್ನೆಚ್ಚರಿಕಾ ಕ್ರಮವನ್ನು ಎಲ್ಲಾ ವರ್ಗದ ಜನರಿಗಾಗಿ ಕೈಗೊಳ್ಳಬೇಕು ಇಲ್ಲವಾದಲ್ಲಿ ಮತ್ತೊಮ್ಮೆ ಜನತೆ ಅತೀವ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.