ಈ ಕೋಣಕ್ಕೆ 1.50 ಕೋಟಿ ಬೆಲೆ ನಿರೀಕ್ಷೆ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಇಲ್ಲಿನ ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದ ವಿಲಾಸ ಗಣಪತಿ ನಾಯಿಕ ಕುಟುಂಬದವರು ಸಾಕಿರುವ ಕೋಣ ಬರೋಬ್ಬರಿ ಒಂದೂವರೆ ಟನ್ ತೂಗುತ್ತಾನೆ. ಅಷ್ಟೇಅಲ್ಲದೆ ಈ ಕೋಣಕ್ಕೆ 1.50 ಕೋಟಿ ಬೆಲೆ ನಿರೀಕ್ಷೆ ಮಾಡಲಾಗಿದೆ ಎಂದರೆ ನಂಬಲೇಬೇಕು. ಈ ಕುಟುಂಬ ಹೈನುಗಾರಿಕೆ ನೆಚ್ಚಿಕೊಂಡು ಉಪಜೀವನ ನಡೆಸುತ್ತಿದೆ. 4 ವರ್ಷಗಳ ಹಿಂದೆ ತಾವು ಸಾಕಿದ್ದ ಎಮ್ಮೆಯೊಂದರ ಕರುವೇ ಈ ‘ಗಜೇಂದ್ರ’. ದಷ್ಟಪುಷ್ಟವಾಗಿ ಅದು ಬೆಳೆದಿದ್ದು, ನಾಯಿಕ ಕುಟುಂಬದವರು ಬಹಳ ಕಾಳಜಿಯಿಂದ ಸಾಕುತ್ತಿದ್ದಾರೆ. ಗಜೇಂದ್ರನಿಗೆ ಪ್ರತಿ ದಿನ 15 ಲೀಟರ್ ಹಾಲು ಕುಡಿಸುತ್ತಾರೆ. 2 ರಿಂದ 3 ಕಿ.ಗ್ರಾಂ.ನಷ್ಟು ಹತ್ತಿ ಹಿಂಡಿ, ಕಬ್ಬು, ಹಸಿ ಮತ್ತು ಒಣ ಮೇವನ್ನೂ ನಿಯಮಿತವಾಗಿ ನೀಡುತ್ತಾರೆ. ಅಥಣಿ ತಾಲ್ಲೂಕಿನ ಐನಾಪುರ, ಮಹಾರಾಷ್ಟçದ ತಾಸಗಾಂವ, ಅಹಮದಾಬಾದ್‌ನಲ್ಲಿ ನಡೆದ ಜಾನುವಾರುಗಳ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ‘ಗಜೇಂದ್ರ’ನ ಗಜ ಗಾತ್ರದ ಮೈಕಟ್ಟು ಕಂಡು ಜನ ಬೆರಗಾಗಿದ್ದಾರೆ.

‘ತಾಸಗಾಂವದಲ್ಲಿ ಗಜೇಂದ್ರನನ್ನು 80 ಲಕ್ಷಕ್ಕೆ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಈಚೆಗೆ ಸಾಂಗ್ಲಿಯಲ್ಲಿ ನಡೆದ ಜಾನುವಾರು ಪ್ರದರ್ಶನದಲ್ಲಿ 1 ಕೋಟಿ ಬೆಲೆ ಕಟ್ಟಲಾಗಿದೆ. ಆದರೆ, ಒಂದೂವರೆ ಕೋಟಿ ರೂಪಾಯಿಗೂ ಅಧಿಕ ಬೆಲೆ ಬಂದರೆ ಮಾತ್ರ ಮಾರುತ್ತಾರಂತೆ ಗಜೇಂದ್ರನ ಮಾಲೀಕ ವಿಲಾಸ ಗಣಪತಿ ನಾಯಿಕ. ‘ನಮ್ಮ ಕುಟುಂಬ ಹೈನುಗಾರಿಕೆಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದೆ. ಹರಿಯಾಣ ಮೊದಲಾದ ಕಡೆಗಳಿಂದ 50 ಎಮ್ಮೆಗಳನ್ನು ತಂದು ಸಾಕಿದ್ದೇವೆ. ನಮಗೆ ಹೊಲವಿಲ್ಲ. ಪ್ರತಿ ತಿಂಗಳು 50 ಸಾವಿರ ಮೌಲ್ಯದ ಮೇವು, ಹಿಂಡಿ ಖರೀದಿಸಿ ಜಾನುವಾರುಗಳಿಗೆ ನೀಡುತ್ತೇವೆ. ನಿತ್ಯ ಸಂಜೆ ಮತ್ತು ಬೆಳಿಗ್ಗೆ ಸೇರಿ 100 ಲೀಟರ್ ಹಾಲು ಮಾರುತ್ತೇವೆ. ನಿತ್ಯ 5 ಸಾವಿರ ಆದಾಯವಿದೆ. ಕೊಟ್ಟಿಗೆ ಗೊಬ್ಬರ ಮಾರಾಟದಿಂದ ಪ್ರತಿ ವರ್ಷ ಅಂದಾಜು 2 ಲಕ್ಷ ಬರುತ್ತದೆ. ಮನೆಯ ಎಲ್ಲರೂ ಜಾನುವಾರು ಸಾಕಣೆಯಲ್ಲೇ ತೊಡಗಿಕೊಂಡಿದ್ದೇವೆ’ ಎಂದು ವಿಲಾಸ ನಾಯಿಕ, ಪುತ್ರರಾದ ಜ್ಞಾನದೇವ ಮತ್ತು ಆನಂದ ನಾಯಿಕ ಹೇಳುತ್ತಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!