ಸಾಗುವಳಿದಾರರಿಗೆ ಶೀಘ್ರದಲ್ಲೇ ಭೂ ಮಂಜೂರಾತಿ ಪತ್ರ
ಬೆಂಗಳೂರು : ಅಕ್ರಮ ಸಕ್ರಮ ಯೋಜನೆಯಡಿ ಸಾಗುವಳಿದಾರರಿಗೆ ಶೀಘ್ರದಲ್ಲೇ ಭೂ ಮಂಜೂರಾತಿ ಪತ್ರವನ್ನು ನೀಡಲಾಗುವುದು ಎಂದು ಕಂದಾಯ ಸಚಿವ ಅಶೋಕ್ ಅವರು ವಿಧಾನಸಭೆಗೆ ಉತ್ತರಿಸಿದ್ದಾರೆ. ಶಾಸಕ ರಾಜೇಶ್‌ಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಶಿರಾ ತಾಲ್ಲೂಕಿನ ಮುದಿಗೆರೆ ಗ್ರಾಮದ ಸರ್ವೆ ನಂ.12ರಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಶೀಘ್ರದಲ್ಲೇ ಸರ್ವೇ ನಡೆಸಿ ಗಡಿ ಗುರುತಿಸುವಿಕೆ ಕೆಲಸ ಮಾಡಲಾಗುವುದು. ನಂತರ ಸಾಗುವಳಿದಾರರಿಗೆ ಭೂ ಮಂಜೂರಾತಿ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.
ಭೂ ಮಂಜೂರಾತಿ ಮಾಡುವ ಕುರಿತು ಸಮಿತಿಯನ್ನು ರಚಿಸಲಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಈ ಮೊದಲು ನಮಗೆ ಸಮೀಕ್ಷೆ ನಡೆಸಲು ಸರ್ವೇಯರ್‌ಗಳ ಕೊರತೆ ಇತ್ತು. ಈಗ ನೋಂದಾಯಿತ 3 ಸಾವಿರ ಸರ್ವೇಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಗಡಿ ಗುರುತಿಸುವಿಕೆ ಕಾರ್ಯ ಮುಗಿದ ನಂತರ ಉಳುಮೆ ಚೀಟಿಯನ್ನು ರೈತರಿಗೆ ನೀಡಲಾಗುವುದು ಎಂದರು.