ಪ್ರತಿ ವರ್ಷ ರಾಜ್ಯದಲ್ಲಿ 500 ಕೋಟಿ ಕ್ಯೂ ಆರ್ ಕೋಡ್ ಟೇಪ್ ಹಗರಣ: ಸೈಯದ್ ಸೈಫುಲ್ಲಾ
ದಾವಣಗೆರೆ: ವಾಣಿಜ್ಯ ವಾಹನಗಳಿಗೆ ಕ್ಯೂ ಆರ್ ಕೋಡ್ ಹೊಂದಿರುವ ರೆಟ್ರೋ ರಿಫ್ಲೆಕ್ಟಿವ್ ಟೇಪ್ ಅಳವಡಿಕೆಯಲ್ಲಿ ಪ್ರತಿ ವರ್ಷ 500 ಕೋಟಿ ರೂ.ಗಳ ಹಗರಣ ನಡೆಯುತ್ತಿದೆ ಎಂದು ದಾವಣಗೆರೆ ಜಿಲ್ಲಾ ಲಾರಿ ಮಾಲೀಕರು ಹಾಗೂ ಟಾನ್ಸ್‌ಪೋರ್ಟ್ ಏಜೆಂಟರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಹೇಳಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ವಾಣಿಜ್ಯ ವಾಹನಗಳಿಗೆ ಕ್ಯೂ ಆರ್ ಕೋಡ್ ಹೊಂದಿರುವ ರೆಟ್ರೋ ರಿಫ್ಲೆಕ್ಟಿವ್ ಟೇಪ್ ಅಳವಡಿಕೆ ಕಡ್ಡಾಯಗೊಳಿಸಿ ಆದೇಶಿಸಿದೆ.
ಆದರೆ ಕೆಲವೇ ಕಂಪನಿಗಳಿಂದ ಈ ಟೇಪ್ ಖರೀದಿಗೆ ಅವಕಾಶವಿದ್ದು, ಈ ಕಂಪನಿಗಳು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಟೇಪ್ ಮಾರಾಟ ಮಾಡುತ್ತಿವೆ ಇದರಿಂದ ಮಾಲೀಕರಿಗೆ ಹೊರೆಯಾಗುತ್ತಿದೆ. ಅಲ್ಲದೇ ಈ ಕಂಪನಿಗಳು ಖರೀದಿದಾರರಿಗೆ ಜಿಎಸ್‌ಟಿ ರಶೀದಿ ನೀಡುತ್ತಿಲ್ಲ ಈ ಬಗ್ಗೆ ತೆರಿಗೆ ಇಲಾಖೆ ಅಧಿಕಾರಿಗಳೂ ಸಹ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಕ್ಯೂ ಆರ್‌ಕೋಡ್ ಇರುವ ಟೇಪ್ ಅಳವಡಿಸಿದರೆ ಮಾತ್ರ ಅರ್ಹತೆ ಪತ್ರ ನವೀಕರಿಸುತ್ತಿದ್ದಾರೆ. ಆದರೆ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತೆ ಸಮಿತಿ ಆದೇಶದಲ್ಲಿ ಕ್ಯೂ ಆರ್‌ಕೋಡ್ ಬಗ್ಗೆ ಎಲ್ಲಾ ಪ್ರಸ್ತಾಪ ಇಲ್ಲ ಬೇರೆ ಯಾವ ರಾಜ್ಯದಲ್ಲೂ ಕ್ಯೂ ಆರ್‌ಕೋಡ್ ಟೇಪ್ ಕಡ್ಡಾಯವಿಲ್ಲ. ಆದರೆ ರಾಜ್ಯದಲ್ಲಿ ಮಾತ್ರ ಏಕೆ ಕಡ್ಡಾಯ ಎಂದು ಪ್ರಶ್ನಿಸಿದರು.
ರಾಜ್ಯಾದ್ಯಂತ ನಿತ್ಯ ಟೇಪ್ ಅಳವಡಿಸಿ ಅರ್ಹತಾ ಪತ್ರ ಪಡೆಯುವ ವಾಹನಗಳಿಂದ ವಾರ್ಷಿಕ ಸುಮಾರು 500 ಕೋಟಿ ರೂ. ಹೆಚ್ಚು ವಹಿವಾಟು ನಡೆಯುತ್ತಿದೆ. ಕ್ಯೂಆರ್ ಕೋಡ್ ನೆಪದಲ್ಲಿ ದೊಡ್ಡ ಹಗರಣವೇ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ವಾರದೊಳಗೆ ಕ್ಯೂ ಆರ್ ಕೋಡ್ ಟೇಪ್ ಕಡ್ಡಾಯ ಎಂಬ ನಿರ್ಧಾರ ಕೈ ಬಿಡಬೇಕು. ಇಲ್ಲದಿದ್ದರೆ ಆರ್‌ಟಿಒ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ, ಮಹಾಂತೇಶ್ ಒಣರೊಟ್ಟಿ, ಘನಿಸಾಬ್, ಸಾಧಿಕ್ ಅಹ್ಮದ್, ದಾದಾಪೀರ್, ಮಸೂದ್, ಖಲೀಂ ಉಲ್ಲಾ, ಗಫೂರ್ ಇತರರು ಉಪಸ್ಥಿತರಿದ್ದರು.