ದಾವಣಗೆರೆ:(Gandhi Jayanthi) ನಮ್ಮ ಭಾಷೆ ಮತ್ತು ತಾಯಿನಾಡು ನಮಗೆ ಎಷ್ಟು ಮುಖ್ಯವೋ, ಗಾಂಧೀಜಿಯವರು ಕೂಡ ಭಾರತದ ಪ್ರತಿಯೊಬ್ಬ ಪ್ರಜೆಯ ಅಸ್ಮಿತೆಯಾಗಿದ್ದಾರೆ. ಗಾಂಧೀಜಿ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರೊಂದು ಸಂಸ್ಕೃತಿ, ಆಸ್ತಿ, ವಿಶ್ವಕೋಶ ಹಾಗೂ ಜೀವನಕ್ರಮ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಪ್ರತಿಪಾದಿಸಿದರು.
ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಮನಗರದ ಗಾಂಧಿಭವನದಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಅವರ 157 ನೇ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ 122 ನೇ ಜಯಂತಿಯನ್ನು ಚರಕ ನುಲಿಯುವ ಮೂಲಕ ಹಾಗೂ ಗಣ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಇಂದಿನ ಜಾಗತಿಕ ಸನ್ನಿವೇಶದಲ್ಲಿ ನಡೆಯುತ್ತಿರುವ ವಿವಿಧ ಘಟನೆಗಳಿಗೆ ಗಾಂಧೀಜಿಯವರ ತತ್ವಗಳು, ಆದರ್ಶಗಳು ಮತ್ತು ಮಾರ್ಗದರ್ಶನವೇ ಪ್ರಮುಖ ದಾರಿದೀಪವಾಗಿವೆ. ಗಾಂಧೀಜಿಯವರು ಅಂತರರಾಷ್ಟ್ರೀಯ ಮಟ್ಟವನ್ನು ಮೀರಿ ಬೆಳೆದ ಅಗಾಧ ವ್ಯಕ್ತಿತ್ವ ಹೊಂದಿದವರಾಗಿದ್ದು, ದೇಶ-ವಿದೇಶಗಳಲ್ಲಿ ನಮ್ಮತನವನ್ನು ಹೆಮ್ಮೆಯಿಂದ ಗುರುತಿಸಿಕೊಳ್ಳಲು ಅವರ ಚಿಂತನೆಗಳು ಪ್ರಮುಖ ಆಧಾರವಾಗಿವೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿಯವರು ರಚನಾತ್ಮಕ ಕಾರ್ಯಕ್ರಮಗಳ ಪಟ್ಟಿಯನ್ನು ಪರಿಶೀಲಿಸಿದರೆ, ಇಂದಿನ ಸರ್ಕಾರದ ಸಮಗ್ರ ಯೋಜನೆಗಳು ಹಾಗೂ ಆಶಯಗಳು ಅದರಲ್ಲಿಯೇ ಅಡಕವಾಗಿರುವುದು ಸ್ಪಷ್ಟವಾಗುತ್ತದೆ. ನೂರು ವರ್ಷಗಳ ಹಿಂದೆಯೇ ಗಾಂಧೀಜಿಯವರು ಪ್ರತಿಪಾದಿಸಿದ ಗ್ರಾಮ ಸ್ವರಾಜ್ಯ, ವಿಕೇಂದ್ರೀಕರಣ, ಗ್ರಾಮೀಣ ಅಭಿವೃದ್ಧಿ, ಪರಿಸರ ಹಾಗೂ ಗ್ರಾಮ ಸ್ವಚ್ಛತೆಯ ಕಲ್ಪನೆಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಇಂದು ಕಾರ್ಯಾಚರಿಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ̧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಹಾಗೂ ಸರ್ವೋಚ್ಚ ನ್ಯಾಯಾಲಯದ ಹಲವು ಐತಿಹಾಸಿಕ ತೀರ್ಪುಗಳಿಗೆ ಗಾಂಧೀಜಿಯವರ ದೃಷ್ಟಿಕೋನವೇ ಮೂಲಾಧಾರವಾಗಿದೆ ಎಂದರು.
ಮಾನವೀಯತೆ ಇಲ್ಲದ ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವಕುಲಕ್ಕೆ ಅನುಕೂಲಕ್ಕಿಂತ ಹೆಚ್ಚಾಗಿ ಹಾನಿಯನ್ನೇ ಉಂಟುಮಾಡುತ್ತದೆ. ಹೀಗಾಗಿ ಇಂದಿನ ಕಾಲಘಟ್ಟದಲ್ಲಿ ಹಾಗೂ ಮುಂದಿನ ಪೀಳಿಗೆಗೆ ಗಾಂಧೀಜಿಯವರ ವಿಚಾರಗಳನ್ನು ಅರ್ಥೈಸಿಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ ಎಂದರು.
ಸಮಾಜದಲ್ಲಿ ಸ್ವಚ್ಛತೆ ಮತ್ತು ಸಂಸ್ಕಾರದ ಜಾಗೃತಿ ಮೂಡುವುದು ಅತ್ಯಗತ್ಯ. ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಹಾಗೂ ತ್ಯಾಜ್ಯ ಎಸೆಯುವ ಪ್ರವೃತ್ತಿ ತಡೆದು, ದಿನನಿತ್ಯದ ಜೀವನದಲ್ಲಿ ನೈರ್ಮಲ್ಯವನ್ನು ಸಂಸ್ಕಾರವನ್ನಾಗಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸಾಹಿತ್ಯ ಎಂ ಆಲದಕಟ್ಟಿ ಅವರು ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತತ್ವಗಳು, ನೈತಿಕ ಮೌಲ್ಯಗಳು ಹಾಗೂ ಸರಳತೆಯ ಜೀವನ ನಮಗೆಂದೂ ಮಾರ್ಗದರ್ಶಕ ಮತ್ತು ಪ್ರೇರಣಾದಾಯಿಯಾಗಿದೆ. ಮಹಾನ್ ನಾಯಕರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗಾಂಧೀಜಿಯವರು ದೇಶದ ಹಳ್ಳಿಗಳನ್ನು ಸ್ವಚ್ಛ, ಸ್ವಾವಲಂಬಿ ಹಾಗೂ ಸದೃಢ ಘಟಕಗಳನ್ನಾಗಿ ಕಾಣಲು ಬಯಸಿದ್ದರು. ಪ್ರಸ್ತುತ ಜಾರಿಯಲ್ಲಿರುವ ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಆಡಳಿತಾತ್ಮಕ ಯೋಜನೆಗಳು ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಸಚಿವ ಅವಧಿಯಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸ್ತ್ರಿಜಿಯವರ ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯುತ ನಾಯಕತ್ವ ಇಂದಿನ ಪೀಳಿಗೆಗೆ ಅತ್ಯಂತ ಮಾದರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಹೆಚ್.ಟಿ ಅವರು ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಎರಡನೇ ಪ್ರಧಾನಿ ದಿವಂಗತ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ತತ್ವಾದರ್ಶ, ತ್ಯಾಗ ಮತ್ತು ವಿಚಾರಧಾರೆಗಳನ್ನು ಪ್ರಸ್ತುತ ಹಾಗೂ ಮುಂದಿನ ಪೀಳಿಗೆಗೆ ತಲುಪಿಸಿ, ಅವರ ಮಾರ್ಗದಲ್ಲಿ ನಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅರ್ಧರಾತ್ರಿ 12 ಗಂಟೆಗೆ ಮಹಿಳೆಯೊಬ್ಬಳು ನಿರ್ಭಯವಾಗಿ ನಡೆದಾಡಿದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ ಎಂಬ ಗಾಂಧೀಜಿಯವರ ಪರಿಕಲ್ಪನೆಯಂತೆ, ಮಹಿಳಾ ಸಬಲೀಕರಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಹೆಣ್ಣುಮಕ್ಕಳ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಬದ್ಧವಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಹಾತ್ಮ ಗಾಂಧೀಜಿಯವರು ಸತ್ಯ ಹಾಗೂ ಅಹಿಂಸೆಯ ಮಾರ್ಗವನ್ನು ತೋರಿದರೆ, ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಯವರು ಅತ್ಯಂತ ಸರಳ ಜೀವನದ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತರಬೇಕು ಎಂದರು.
ಇದೇ ಸಂದರ್ಭದಲ್ಲಿ ಸಿದ್ಧಗಂಗಾ ಶಾಲೆ, ಈಶ್ವರಮ್ಮ ಶಾಲೆ ಹಾಗೂ ಅಜಯ್ ನಾರಾಯಣ್ ಅವರು ಪ್ರಸ್ತುತಿಪಡಿಸಿದ ಭಜನೆ ಸಭಿಕರನ್ನು ಆಕರ್ಷಿಸಿತು. ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಬಾರಿಯ ಗಾಂಧಿ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಅವರು ನಿರೂಪಿಸಿದರು , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಧನಂಜಯ್ ಅವರು ವಂದಾನರ್ಪಣೆ ಮಾಡಿದರು.
ಮಹಾತ್ಮ ಗಾಂಧೀಜಿ ಕುರಿತು ಪ್ರೌಡಶಾಲೆ, ಪದವಿ ಪೂರ್ವ ಮತ್ತು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು ಪ್ರಶಸ್ತಿ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಶಸ್ತಿ ವಿಜೇತರ ವಿವರಗಳು:
ಪ್ರೌಡಶಾಲಾ ವಿಭಾಗ : ಪ್ರಥಮ ಬಹುಮಾನ– ಮೆಳ್ಳೆಕಟ್ಟೆ ಸರ್ಕಾರಿ ಪ್ರೌಡಶಾಲೆಯ ಚೇತನ ಬಿ.ಟಿ., ದ್ವಿತೀಯ ಬಹುಮಾನ– ಪಿ.ಎಂ.ಶ್ರೀ ಸರ್ಕಾರಿ ಪ್ರೌಢಶಾಲೆಯ ತೇಜಸ್ವಿನಿ ಡಿ ಹಾಗೂ ತೃತೀಯ ಬಹುಮಾನ–ಶ್ರೀ ಸಿದ್ದಗಂಗಾ ಪ್ರೌಡಶಾಲಾ ಕೋಮಲ ಎಸ್.ಪಿ.
ಪದವಿ ಪೂರ್ವ ವಿಭಾಗ: ಪ್ರಥಮ ಬಹುಮಾನ– ದಾವಣಗೆರೆ ಮಾಜಿಪುರಸಭೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೆಹಕ್ ಎಂ ., ದ್ವಿತೀಯ ಬಹುಮಾನ– ಹರಿಹರ ಅಂಬೇಡ್ಕರ್ ಪದವಿ ಪೂರ್ವಕಾಲೇಜಿನ ಚೇತನ್ ಎಂ ಹಾಗೂ ತೃತೀಯ ಬಹುಮಾನ– ದಾವಣಗೆರೆ ದವನ್ ಪದವಿ ಪೂರ್ವ ಕಾಲೇಜಿನ ಸೌಜನ್ಯ ವೈ ಎಂ .
ಪದವಿ ವಿಭಾಗ: ಪ್ರಥಮ ಬಹುಮಾನ– ದಾವಣಗೆರೆ ಎಸ್.ಬಿ.ಸಿ ಕಾಲೇಜಿನ ಮೇಘನಾ ಎಂ., ದ್ವಿತೀಯ ಬಹುಮಾನ– ಬಸವಾ ಪಟ್ಟಣದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತ್ರಿವೇಣಿ ಸಿ.ಎನ್ ಹಾಗೂ ತೃತೀಯ ಬಹುಮಾನ– ಎಸ್.ಜಿ.ಕೆ.ಕೆ.ಎಸ್.ಎಫ್ .ಜಿ ಮಹಿಳಾ ಕಾಲೇಜಿನ ಅಮೃತ ಎನ್
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಯೋಜನಾ ನಿರ್ದೇಶಕ ಗಿರೀಶ್, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಮಮತಾ ಗೌಡರ್ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ದುಡಾ ಆಯುಕ್ತೆ ರೇಣುಕಾ, ತಹಶೀಲ್ದಾರ್ ರಾಜೇಶ್ ಸಮಾಜ ಸೇವಕ ಅವರಗೆರೆ ರುದ್ರಮುನಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಶಿಕ್ಷಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
Leave a comment