ದಾವಣಗೆರೆ: (Robbery) ದಾವಣಗೆರೆಯಲ್ಲಿ ಬಟ್ಟೆ ವ್ಯಾಪಾರಿಯೊಬ್ಬರನ್ನು ಹಣಕಾಸಿನ ಮಾತುಕತೆ ನೆಪದಲ್ಲಿ ಕರೆದೊಯ್ದು, ಕೊಠಡಿಯೊಂದರಲ್ಲಿ ಬಂಧಿಸಿ 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಕುವೆಂಪು ನಗರ ನಿವಾಸಿ ಹಾಗೂ ಬಟ್ಟೆ ಅಂಗಡಿ ಮಾಲೀಕ ಹಲ್ಲೆಗೊಳಗಾದ ಯುವಕ. ಸೆಪ್ಟೆಂಬರ್ 9ರಂದು ಮಧ್ಯಾಹ್ನ ಪರಿಚಿತ ಸ್ನೇಹಿತ ಹಣಕಾಸಿನ ವಿಚಾರ ಮಾತನಾಡೋಣ ಎಂದು ಬೈಕಿನಲ್ಲಿ ಕರೆದುಕೊಂಡು ಹೋಗಿದ್ದನು. ಶಾಮನೂರು ರಸ್ತೆಯ ಬಾಪೂಜಿ ಸಮುದಾಯ ಭವನದ ಬಳಿ ತಲುಪಿದ ಬಳಿಕ, ಮತ್ತೊಬ್ಬ ವ್ಯಕ್ತಿಯ ಜೊತೆ ಆಂಜನೇಯ ಬಡಾವಣೆಯ 14ನೇ ಕ್ರಾಸ್ನಲ್ಲಿರುವ ಮನೆಯೊಂದಕ್ಕೆ ಕರೆದೊಯ್ಯಲಾಗಿತ್ತು.
ಮನೆಯೊಳಗೆ ಹೋಗುತ್ತಿದ್ದಂತೆಯೇ ಅಲ್ಲಿದ್ದ ನಾಲ್ವರು ವ್ಯಕ್ತಿಗಳು ಬಾಗಿಲು ಹಾಕಿ ಉದ್ಯಮಿ ಅವರ ಮೊಬೈಲ್ ಕಸಿದುಕೊಂಡಿದ್ದಾರೆ. ’10 ಲಕ್ಷ ರೂಪಾಯಿ ಹಣ ತರಿಸು, ಇಲ್ಲದಿದ್ದರೆ ಮುಗಿಸಿಬಿಡುತ್ತೇವೆ’ ಎಂದು ಬೆದರಿಕೆ ಹಾಕಿ, ಬಿಯರ್ ಬಾಟಲಿ ಹಾಗೂ ಮರದ ರಿಪೀಸ್ನಿಂದ ಬೆನ್ನು ಮತ್ತು ದೇಹದ ಭಾಗಗಳಿಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಉದ್ಯಮಿ ಅವರೊಂದಿಗಿದ್ದ ಇನ್ನೊಬ್ಬ ಯುವಕನ ಮೇಲೆಯೂ ಹಲ್ಲೆ ನಡೆಸಲಾಗಿದ್ದು, ಆತ ತಪ್ಪಿಸಿಕೊಂಡು ಓಡಿಹೋಗಿದ್ದಾನೆ.
ಸಂಜೆ 7 ಗಂಟೆಯ ಸುಮಾರಿಗೆ ಉದ್ಯಮಿ ಅವರ ಪೋಷಕರು ಮತ್ತು ಸ್ನೇಹಿತರು ಮೊಬೈಲ್ ಲೊಕೇಶನ್ ಆಧರಿಸಿ ಹುಡುಕಾಡುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು, ಉದ್ಯಮಿಯ ಫೋನ್ ಮತ್ತು ಪರ್ಸ್ ಕಸಿದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಗಾಯಗೊಂಡ ಉದ್ಯಮಿ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಸ್ನೇಹಿತ ಸೇರಿದಂತೆ ಐವರು ಅಜ್ಞಾತ ಆರೋಪಿಗಳ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ದಾವಣಗೆರೆ ವಿದ್ಯಾನಗರ ಪೋಲೀಸರು ದೂರಿನ ಅನ್ವಯ ಹಲ್ಲೆ ನಡೆಸಿದವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಹೆಚ್ಚಿನ ವಿವರ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.
Leave a comment