ಕೊರಚರಹಟ್ಟಿಯ ಹಂದಿಗಳ ಗೂಡಿನಲ್ಲಿ , ಒಂದು ಸುಂದರ ಪೊಲೀಸ್ ಠಾಣೆ
ದಾವಣಗೆರೆ : ಒಂದಾನೊಂದು ಕಾಲದಲ್ಲಿ ಈ ಏರಿಯಾಗೆ ಕಾಲಿಡಲು ಜನರು ಹೆದರುತ್ತಿದ್ದರು, ಅಲ್ಲದೇ ದೋ ನಂಬರ್ ದಂಧೆಗಳೇ ಇಲ್ಲಿ ಜಾಸ್ತಿಯಾಗಿತ್ತು.. ಆದರೀಗ ಜನರು ಈ ಏರಿಯಾಗೆ ಯಾವುದೇ ಭೀತಿಯಿಲ್ಲದೇ ಆರಾಮವಾಗಿ ಬರಬಹುದು.. ಅಲ್ಲದೇ ಈ ಠಾಣೆಗೆ ನೋವು ಹೇಳಿಕೊಂಡು ಬರೋರಿಗೆ ಇಲ್ಲಿನ ಪರಿಸರವೇ ಸಮಾಧಾನ ತರುತ್ತದೆ. ನಾವು ಹೇಳೋದಕ್ಕೆ ಹೊರಟಿರೋದು ಕೆಟಿಜೆ ನಗರ ಸುಂದರ ಪೊಲೀಸ್ ಠಾಣೆ… ಇಡೀ ಜಿಲ್ಲೆಯಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿರುವ ಈ ಪೊಲೀಸ್ ಠಾಣೆಯಲ್ಲಿ ಪರಿಸರ ಮಾತ್ರವಲ್ಲ, ನೀತಿ ಪಾಠಗಳು ಕೂಡ ಕಾಣ ಸಿಗುತ್ತದೆ.
ಈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಮುಖ ರೌಡಿ ಶೀಟರ್ ಗಳಾದ ಮೊಟ್ ಬಳ್ ಸೀನಾ, ಕಣುಮ, ಸೇರಿದಂತೆ ಇನ್ನಿತರರು ಈ ಠಾಣೆ ವ್ಯಾಪ್ತಿಗೆ ಬರುತ್ತಿದ್ದು, ಅವರಲ್ಲಿ ಕ್ರೂರತನ ಹೋಗಲಾಡಿಸಲು ಇಲ್ಲಿನ ಸಿಬ್ಬಂದಿ ಸಾಕಷ್ಟು ಶ್ರಮಿಸಿದ್ದಾರೆ. ಇಲ್ಲಿ ಸ್ನೇಹಮಯಿ ವಾತಾವರಣವಿದ್ದು, ಪ್ರತಿ ದಿನ ನಡೆಯುವ ಅಪರಾಧಗಳು ಹಾಗೂ ಅವುಗಳಿಗೆ ಇರುವ ಶಿಕ್ಷೆಯ ಬಗ್ಗೆ ಮಾಹಿತಿ ಬೋರ್ಡ್, ಅಪರಾಧ ಕೃತ್ಯಗಳನ್ನು ತಡೆಯುವ ಬಗ್ಗೆ ಮುನ್ನೆಚ್ಚರಿಕೆಯ ಮಾಹಿತಿಯ ಬೋರ್ಡ್, ನಿಮ್ಮ ಕಷ್ಟಕ್ಕೆ ನಾನಿದ್ದೇನೆ ಎಂದು ನೊಂದ ವ್ಯಕ್ತಿಗೆ ಧೈರ್ಯ ತುಂಬುವ ಪೊಲೀಸ್ ಪ್ರತಿಮೆ. ಮಾವು ಹಲಸು ನೇರಳೆ ಸಪೋಟ ಸೀತಾಫಲ, ರಾಮ್ ಫಲ ಹಾಗೂ ಇತರೆ ಹಣ್ಣಿನ ಮತ್ತು ವಿಧವಿಧವಾದ ಹೂವಿನ ಗಿಡಗಳಿಂದ ತುಂಬಿ ಕಂಗೊಳಿಸುವ ಸುಂದರವಾದ ವಾತಾವರಣ ವಿದೆ.
ಇನ್ನು ಜೀವನ ಎಂದರೆ ಏನು? ಹೇಗೆ ನಡೆಸಬೇಕು ಹೇಗೆ ಸುಂದರವಾಗಿ ಬದುಕಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವ ಸ್ಲೋಗನ್ ಗಳ ಬೋರ್ಡ್ ಗಳು., ಒಂದು ಹನಿಯೂ ನೀರು ಚರಂಡಿ ಸೇರದಂತೆ ಮಾಡಿರುವ ಹಿಂಗು ತೊಟ್ಟಿ. ತುರ್ತು ಸಂದರ್ಭಗಳಿಗೆ ಸಿದ್ಧವಾಗಿರುವ ಆಂಬುಲೆನ್ಸ್., ಹಲವಾರು ವರ್ಷಗಳ ದಾಖಲೆಗಳನ್ನು ವರ್ಷವಾರು ಸುಂದರವಾಗಿ ಕಾಣುವಂತೆ ಜೋಡಿಸಿ ಇಟ್ಟಿರುವ ಕಡತಗಳು. ವರ್ಷವಾರು ಪ್ರತ್ಯೇಕವಾಗಿ ಜೋಡಿಸಿಟ್ಟಿರುವ ಜಪ್ತ ಮಾಡಿದ ವಾಹನಗಳು ಹಾಗೂ ವಸ್ತುಗಳು. ಇಲ್ಲಿಯವರೆಗೆ ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ಮಿಸಿರುವ ಪೊಲೀಸ್ ಅಧಿಕ್ಷಕರ ಫೋಟೋಗಳ ಗ್ಯಾಲರಿ. ಅರ್ಜಿದಾರರು ಹಾಗೂ ಎದುರುದಾರರನ್ನು ಒಟ್ಟಿಗೆ ಕೂರಿಸಿ ಸಮಸ್ಯೆಯನ್ನು ಬಗೆಹರಿಸಲು ಇರುವ ಕೊಠಡಿಗಳು. ಠಾಣೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದಲೇ ಸಾವಿರಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಗಳನ್ನು ಹಾಕಿಸಿ ಪಬ್ಲಿಕ್ ಸೇಫ್ಟಿ ಆಕ್ಟ್ ಅತ್ಯುತ್ತಮವಾಗಿ ಜಾರಿಗೆ ಕ್ರಮ ಇದಕ್ಕೆ ಸಾರ್ವಜನಿಕರಿಂದ ಅಭಿನಂದನೆಗಳು.
ಹಗಲಿರುಳು ತುರ್ತಾಗಿ ನಿಮಗೆ ಸೇರಲು ನಾನಿದ್ದೇನೆ ಎಂದು ಪ್ರತಿ ಮನೆಗೂ ದೂರವಾಣಿ ಸಂಖ್ಯೆ ನೀಡಿ ಪ್ರತಿದಿನ ಗಸ್ತು ಮಾಡಿ ಪೋಲಿಪುಂಡರ ಹಾವಳಿಯನ್ನು ತಪ್ಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ ಸರ್ಕಾರದ “ಸುಧಾರಿತ ಗಸ್ತು ಬೀಟು” ವ್ಯವಸ್ಥೆಯ ಅತ್ಯುತ್ತಮ ಜಾರಿ. ಹಿರಿಯ ನಾಗರಿಕರು ಹಾಗೂ ಒಂಟಿ ಮಹಿಳೆಯರಿಗೆ “ನಿಮಗಾಗಿ ನಾವಿದ್ದೇವೆ’ ಎಂಬ ಧ್ಯೇಯವಾಕ್ಯದೊಂದಿಗೆ ಧೈರ್ಯ ತುಂಬುವ ಅಧಿಕಾರಿ ಮತ್ತು ಸಿಬ್ಬಂದಿ ಇದ್ದಾರೆ. ಕೊರೋನ ವೇಳೆಯಲ್ಲಿ ಪ್ರತಿ ಏರಿಯಾಗೆ ತೆರಳಿ ಮೈಕ್ ನಲ್ಲಿ ಅನೌನ್ಸ್ ಮಾಡುವ ಮೂಲಕ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಹರಿಬಿಡುವುದು, ಪಾಂಪ್ಲೆಟ್ ಗಳನ್ನು ಹಾಗೂ ಬ್ಯಾನರ್ ಹಚ್ಚುವಿಕೆ, ನಾಟಕಗಳು ಹಾಗೂ ನೃತ್ಯಗಳನ್ನು ಮಾಡಿಸುವ ಮೂಲಕ ಜಾಗೃತಿ ಮೂಡಿಸಲಾಗಿತ್ತು.
ಇನ್ನು ಮಾತು ಕೇಳದೆ ಇದ್ದವರಿಗೆ ದೊಣ್ಣೆಪೆಟ್ಟು ಕೂಡ ಇಲ್ಲಿನ ಸಿಬ್ಬಂದಿ ಮಾಡಿದ್ದರು. ಪ್ರಸ್ತುತ ಇನ್ಸ್ಪೆಕ್ಟರ್ ಶಶಿಧರ್ ಯುಜೆ ಪಿಎಸ್ಐ ಮಂಜುಳಾ ಸೇರಿದಂತೆ 62 ಜನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಇಲ್ಲಿದ್ದು, ತನ್ನ ವ್ಯಾಪ್ತಿಯಲ್ಲಿ ಶಾಂತಿ ಕಾಪಾಡುವ ಜತೆಗೆ ಜನರ ಸ್ನೇಹಿಯಾಗಿ ಇಲ್ಲಿನ ಖಾಕಿ ಪಡೆ ಕೆಲಸ ಮಾಡುತ್ತಿದೆ. ಇನ್ನು 2004ನೇ ಸಾಲಿನಲ್ಲಿ ಪೊಲೀಸ್ ಠಾಣೆಯ ಕಟ್ಟಡದ ನಿರ್ಮಾಣವಾಗಿದ್ದು, ಬಾಲ ಬಿಚ್ಚಿದ ರೌಡಿಗಳಿಗೆ ಜೈಲು ಊಟ ಹಾಕಿಸಿದ ಹಾಗೂ ಗಡಿಪಾರು ಮಾಡಿಸಿದ ಸಿಂಹ ಸ್ವಪ್ನವಾಗಿರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವಿದೆ. ಅಲ್ಲದೇ ಕೋಟ್ಯಂತರ ಮೌಲ್ಯದ ನಗದು, ವಾಹನ, ಬಂಗಾರ ಬೆಳ್ಳಿ ವಶಪಡಿಸಿಕೊಂಡು ಕಳ್ಳ ಕಾಕರನ್ನು ಜೈಲಿಗೆ ಕಳುಹಿಸುವುದಷ್ಟೇ ಅಲ್ಲದೆ ಅವರಿಗೆ ಕೌನ್ಸಿಲಿಂಗ್ ಮಾಡಿ ಸಮಾಜಮುಖಿಯಾಗಿ ಬದುಕಲು ನಿಮ್ಮ ಸಹಕಾರಕ್ಕೆ ನಾವಿದ್ದೇವೆ ಎಂದು ಮಾರ್ಗದರ್ಶನ ನೀಡಿ ಸಾಕಷ್ಟು ಕಳ್ಳಕಾಕರನ್ನು ಬದಲಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ನಮ್ಮ ಕಡೆಯಿಂದ ಹ್ಯಾಟ್ಸ್ ಅಫ್.
ಪೇದೆ ಮಂಜುನಾಥ್ ಪರಿಶ್ರಮ : ಈ ಠಾಣೆಯ ಮುಖ್ಯಪೇದೆ ಮಂಜುನಾಥ್ ಸೇರಿದಂತೆ ಅವರ ತಂಡ ಈ ಪೊಲೀಸ್ ಠಾಣೆ ಸುಂದರವಾಗಿರಲು ಕಾರಣೀಕರ್ತರಾಗಿದ್ದಾರೆ. ಅಲ್ಲದೇ ಇಲ್ಲಿರುವ ಪರಿಸರ ಸುಂದರವಾಗಿಸಲು ಇವರ ಶ್ರಮ ಅತ್ಯಧಿಕವಿದ್ದು, ಮೇಲಧಿಕಾರಿಗಳು ಇವರನ್ನು ಬೆಳೆಸಬೇಕಿದೆ.