ಅಂಬೇಡ್ಕರ್ ಜಯಂತಿ ಒಂದು ದಿನಕ್ಕೆ ಸೀಮಿತ ಆಗದಿರಲಿ: ಉಮೇಶ್

ಅಂಬೇಡ್ಕರ್ ಜಯಂತಿ ಒಂದು ದಿನಕ್ಕೆ ಸೀಮಿತ ಆಗದಿರಲಿ: ಉಮೇಶ್

ದಾವಣಗೆರೆ: ಜಾತಿಗಳಿಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿ ಸಮಾಜದ ಕಟ್ಟ ಕಡೆಯ ಸಮಾಜಗಳಿಗೂ ಪ್ರಾತಿನಿಧ್ಯ ನೀಡಿ ಅಂತಹ ಸಮಾಜಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯ, ಭಾರತ ಕಮ್ಯೂನಿಷ್ಟ್ ಪಕ್ಷದ ಜಿಲ್ಲಾ ಸಹಕಾರ್ಯದರ್ಶಿ ಹೆಚ್.ಜಿ.ಉಮೇಶ್ ಹೇಳಿದರು.
ಆವರಗೆರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಕಷ್ಟು ನೋವಿನಲ್ಲೂ ಭಾರತ ಮಾತೆಯ ಕಾವಲುಗಾರನಾಗಿ ಕೆಲಸ ಮಾಡುತ್ತಾ, ಸಮ ಸಮಾಜ, ಜನರಿಗೆ ಉದ್ಯೋಗ, ಶಿಕ್ಷಣ ಮಾತ್ರವಲ್ಲದೇ ರಾಜಕೀಯದಲ್ಲೂ ಸಮಾನತೆ ಕಲ್ಪಿಸುವಲ್ಲಿ ಶ್ರಮಿಸಿದರು ಎಂದು ಸ್ಮರಿಸಿದರು.
ಸಮ ಸಮಾಜ ನಿರ್ಮಾಣ, ಸದೃಢ ಭಾರತ ಕಟ್ಟುವಲ್ಲಿ, ದೇಶದ ಕಾನೂನು ರಚನೆಯಲ್ಲಿ ಅನೇಕ ಅಡೆತಡೆಗಳನ್ನು ನಿಭಾಯಿಸಿಕೊಂಡು, ಮಾನಸಿಕ ಯಾತನೆಗಳನ್ನು ಅನುಭವಿಸಿಕೊಂಡು ಇಡೀ ಜಗತ್ತಿನಲ್ಲೇ ಅತ್ಯಂತ ಉತ್ತಮವಾಗಿರುವ ಸಂವಿಧಾನವನ್ನು ರಚಿಸಿ ನಮಗೆಲ್ಲಾ ಕೊಟ್ಟು ಹೋಗಿದ್ದಾರೆ. ಒಂದು ವೇಳೆ ಅವರು ದಲಿತರ ಮನೆಯಲ್ಲಿ ಹುಟ್ಟದಿದ್ದರೆ ಅದೆಷ್ಟೋ ನಾವು ನೀವುಗಳು ಈಗಲೂ ಉಳ್ಳವರ ಮನೆಯಲ್ಲಿ ಜೀತದ ಆಳುಗಳಾಗಿ ದುಡಿಯಬೇಕಿತ್ತು ಎಂದು ಹೇಳಿದರು.
ಅಂತಹ ಮಹಾತ್ಮನ ಕೊಡುಗೆಯಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಶೈಕ್ಷಣಿಕ, ಔದ್ಯೋಗಿಕ, ರಾಜಕೀಯವಾಗಿ ಗುರುತಿಸಿಕೊಳ್ಳುವಂತಾಗಿದೆ. ಇಂತಹ ಮಹಾನ್ ವ್ಯಕ್ತಿಯ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತ ಆಗಬಾರದು. ಪ್ರತಿನಿತ್ಯ ಅಂಬೇಡ್ಕರರ ಭಾವಚಿತ್ರವನ್ನು ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಎನ್.ಸಿದ್ದೇಶ್, ಈಶ್ವರ್, ಮಂಜುನಾಥ್, ರಮೇಶ್, ಸೈಯದ್, ದಾದಾಪೀರ್, ಪರಶುರಾಮ, ಮೋಹನ್, ಆನಂದ, ಹಾಲಮ್ಮ, ಸಿ.ಪಿ.ಮಲ್ಲಿಕಾರ್ಜುನ್ ಇತರರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!