1 ಕೋಟಿ ಹಣವಿದ್ದ ಆಟೋ ಚೆಕ್ ಪೋಸ್ಟ್ ಬಳಿಯೇ ಕೆಟ್ಟು ನಿಂತಿತ್ತು
ಬೆಂಗಳೂರು: ಚೆಕ್ ಪೋಸ್ಟ್ ಬಳಿಯೇ ಕೆಟ್ಟು ನಿಂತಿದ್ದ ಆಟೋದಲ್ಲಿ 1 ಕೋಟಿ ರೂ. ಹಣ ಇತ್ತು.
ಜಯನಗರದಿಂದ ವಿಜಯನಗರದ ಕಡೆಗೆ 1 ಕೋಟಿ ಹಣವನ್ನು ಆಟೊದಲ್ಲಿ ಕೊಂಡೊಯ್ಯಲಾಗುತ್ತಿತ್ತು. ಪ್ರವೀಣ್ ಹಾಗೂ ಸುರೇಶ್ ಎಂಬುವವರು ಆಟೊದಲ್ಲಿದ್ದರು. ಚೆಕ್‌ಪೋಸ್ಟ್ ಬಳಿಯೇ ಆಟೊ ಕೆಟ್ಟು ನಿಂತಿತ್ತು. ಚಾಲಕ ರಸ್ತೆಯಲ್ಲಿಯೇ ಆಟೊ ದುರಸ್ತಿ ಮಾಡಲು ಮುಂದಾಗಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಇದೀಗ ದಾಖಲೆ ಇಲ್ಲದೇ ಆಟೊದಲ್ಲಿ ಸಾಗಿಸುತ್ತಿದ್ದ ಆ 1 ಕೋಟಿ ಹಣವನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಗುರುವಾರ ಜಪ್ತಿ ಮಾಡಿದ್ದಾರೆ. ಎಸ್.ಜೆ.ಪಾರ್ಕ್ ಠಾಣೆ ವ್ಯಾಪ್ತಿಯ ಕಾಳಿಂಗರಾವ್ ಬಸ್ ತಂಗುದಾಣ ಬಳಿ ಚೆಕ್‌ಪೋಸ್ಟ್ ನಿರ್ಮಿಸಲಾಗಿತ್ತು. ಚುನಾವಣಾಧಿಕಾರಿಗಳ ತಂಡ ಹಾಗೂ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ.
ಕೆಟ್ಟು ನಿಂತಿದ್ದ ಆಟೋ ಬಗ್ಗೆ ವಿಚಾರಿಸಲು ಸಿಬ್ಬಂದಿ, ಆಟೊ ಬಳಿ ಹೋಗಿದ್ದರು. ಆಟೊದಲ್ಲಿ ಬ್ಯಾಗ್‌ಗಳನ್ನು ನೋಡಿದ್ದರು. ಅನುಮಾನಗೊಂಡ ಸಿಬ್ಬಂದಿ, ಚಾಲಕನನ್ನು ವಿಚಾರಿಸಿದ್ದರು. ಉತ್ತರಿಸಲು ಚಾಲಕ ತಡವರಿಸಿದ್ದ. ಮತ್ತಷ್ಟು ಅನುಮಾನ ಬಂದು ಬ್ಯಾಗ್ ಬಿಚ್ಚಿಸಿ ನೋಡಿದಾಗ ಹಣ ಪತ್ತೆಯಾಯಿತು ಎಂದು ತಿಳಿಸಿದರು.