ಅತ್ಯಾಚಾರಿಗಳ ಬಂಧಿಸಿದ ಪೊಲೀಸರಿಗೆ 5 ಲಕ್ಷ ಬಹುಮಾನ ಘೋಷಣೆ – ಗೃಹಸಚಿವ ಅರಗ ಜ್ಞಾನೇಂದ್ರ
ಬೆಂಗಳೂರು: ಮೈಸೂರಿನ ಯುವತಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿಗಳ ಶೀಘ್ರ ಬಂಧಕ್ಕೆ ಸಿಎಂ ಮತ್ತು ನಾನು ಪೊಲೀಸರಿಗೆ ಸೂಚನೆ ನೀಡಿದ್ದೆವು. ಅದರಂತೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರಿಗೆ 5 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೊಲೀಸರು ಶೀಘ್ರ ಬಂಧಿಸುತ್ತಾರೆಂಬ ವಿಶ್ವಾಸ ಇತ್ತು. ಅದರಂತೆ ಶೀಘ್ರ ಕಾರ್ಯಾಚರಣೆ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ತಂಡಗಳಿಗೆ ಐದು ಲಕ್ಷ ಬಹುಮಾನ ನೀಡಲಾಗುವುದು ಎಂದರು.
ಸದ್ಯದ ಸ್ಥಿತಿಯಲ್ಲಿ ಸಂತ್ರಸ್ತೆ ಹೇಳಿಕೆ ಕೊಡುವ ಪರಿಸ್ಥಿತಿಯಲ್ಲಿಲ್ಲ. ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ಮನವೊಲಿಕೆ ಮಾಡ್ತಿದ್ದೇವೆ. ಹೇಳಿಕೆ ಕೊಡುವಂತೆ ಮನವಿ ಮಾಡಲಾಗುತ್ತಿದೆ. ಸಂತ್ರಸ್ತೆ ಮನವೊಲಿಕೆ ಪ್ರಯತ್ನ ಪೊಲೀಸರು ಮಾಡ್ತಿದ್ದಾರೆ. ಆದರೆ, ಇನ್ನೂ ಮನವೊಲಿಸಲು ಸಾಧ್ಯವಾಗಿಲ್ಲ. ಯುವತಿ ಕಡೆಯವರು ಮಾಹಿತಿ ಕೊಟ್ಟಿದ್ದಿದ್ದರೆ ಬೇಗ ಕ್ರಮ ವಹಿಸಬಹುದಿತ್ತು. ಸದ್ಯ ಸಂತ್ರಸ್ತೆ ಎಲ್ಲಿದ್ದಾರೆ ಎಂಬ ಇಲ್ಲ ಎಂದರು.
ಆರೋಪಿಗಳು ತಮಿಳುನಾಡಿನಿಂದ ಪ್ರತಿನಿತ್ಯ ಬಂದು ಹೋಗುತ್ತಿದ್ದರು. ಪೊಲೀಸರು ಸವಾಲು ಎದುರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಪೊಲೀಸರು ತನಿಖೆ ನಡೆಸಿದ್ದಾರೆ ಅವರಿಗೆ ಸರ್ಕಾರದ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಆರೋಪಿಗಳು ವಿದ್ಯಾರ್ಥಿಗಳಲ್ಲ, ಕೂಲಿ ಕಾರ್ಮಿಕರು ಎಂದು ಡಿಜಿ ಸ್ಪಷ್ಟಪಡಿಸಿದ್ದಾರೆ. ಆರೋಪಿಗಳಿಗೆ ಕೋರ್ಟ್ ನಲ್ಲಿ ಶಿಕ್ಷೆ ಕೊಡಿಸೋದು ದೊಡ್ಡ ವಿಚಾರ. ಶಿಕ್ಷೆ ಕೊಡಿಸೋ ಬಗ್ಗೆ ಸರ್ಕಾರ ಕ್ರಮಗೊಳ್ಳಲಿದೆ ಎಂದರು.
ಮೈಸೂರಿಗೆ ತಮಿಳು ನಾಡು, ಕೇರಳದಿಂದ ಬರುವವರ ಸಂಖ್ಯೆ ಹೆಚ್ಚಿದೆ. ಆದರೆ ಬಾರ್ಡರ್ ನಲ್ಲಿ ಬರೋರನ್ನ ಹೋಗೋರನ್ನ ತಡಯೋದಕ್ಕೆ ಆಗೋದಿಲ್ಲ. ಅತ್ಯಾಚಾರ ಪ್ರಕರಣ ಮರುಕಳಿಸದಂತೆ ಚಾಮುಂಡಿ ಬೆಟ್ಟದ ಸುತ್ತಮುತ್ತ ವಿಶೇಷ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ಗಸ್ತು ಏರ್ಪಡಿಸಲಾಗಿದೆ. ರಾತ್ರಿ 7ರ ಬಳಿಕ ಚಾಮುಂಡಿ ಬೆಟ್ಟಕ್ಕೆ ಹೋಗುವವರಿಗೆ ರಕ್ಷಣೆ ಕೊಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.