ಬೆಳಗಾವಿ ಅಧಿವೇಶ – ವಿರೋಧ ಪಕ್ಷಗಳ ಬತ್ತಳಿಕೆಯಲ್ಲಿವೆ ಹಲವು ಅಸ್ತ್ರಗಳು!

Belgaum session: transfer, failure of guarantee and many weapons in the arsenal of opposition parties!

ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸನ್ನದ್ಧಗೊಂಡಿದೆ. ಸರ್ಕಾರದ ವಿರುದ್ಧ ಹಲವು ಅಸ್ತ್ರಗಳನ್ನು‌ ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡಿದೆ. ಜಂಟಿ‌ ಹೋರಾಟದ ಮೂಲಕ ಆಡಳಿತ ಪಕ್ಷ ಕಾಂಗ್ರೆಸ್ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಲು ವಿರೋಧ ಪಕ್ಷಗಳು ಸಜ್ಜುಗೊಂಡಿವೆ. ಈ ಮೂಲಕ ಸದನ ಕದನಕ್ಕೆ ವೇದಿಕೆ ಸಿದ್ಧಗೊಂಡಿದೆ.

ವಿರೋಧ ಪಕ್ಷಗಳ ಬಳಿ ಇರುವ ಅಸ್ತ್ರಗಳೇನು?

ಅಸ್ತ್ರ – 1 ವರ್ಗಾವಣೆ ದಂಧೆ
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಬೆಳಗಾವಿ ಅಧಿವೇಶನದಲ್ಲಿ ಕಟ್ಟಿಹಾಕಲು ಬಿಜೆಪಿ ಮತ್ತು ಜೆಡಿಎಸ್ ಬಳಿ ವರ್ಗಾವಣೆ ದಂಧೆ ಪ್ರಬಲ ಅಸ್ತ್ರವಾಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧವೇ ವಿರೋಧ ಪಕ್ಷಗಳು ಆರೋಪ ಮಾಡಿದ್ದವು. ಡಾ. ಯತೀಂದ್ರ ಅವರು ಮಾತನಾಡಿದ್ದ ಒಂದು ವಿಡಿಯೋ ಕೂಡಾ ವೈರಲ್ ಆಗಿತ್ತು. ಇದು ವರ್ಗಾವಣೆ ದಂಧೆ ಕುರಿತಾಗಿಯೇ ಮಾತನಾಡಿದ್ದು ಎಂದು ಬಿಜೆಪಿ ಹಾಗೂ ಜೆಡಿಎಸ್ ಆರೋಪ ಮಾಡಿತ್ತು. ಆದರೆ ಸಿದ್ದರಾಮಯ್ಯ ಇದನ್ನು ನಿರಾಕರಿಸಿದ್ದರು. ಇದೀಗ ಬೆಳಗಾವಿ ಅಧಿವೇಶನದಲ್ಲಿ ಇದೇ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಬಿಜೆಪಿ‌ ಹಾಗೂ ಜೆಡಿಎಸ್ ರೆಡಿಯಾಗಿವೆ.

ಅಸ್ತ್ರ – 2 ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ವಾಪಸ್
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬಿಎಸ್ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ನೀಡಿದ್ದ ಸಿಬಿಐ ತನಿಖಾ ಅನುಮತಿಯನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ. ಡಿಕೆಶಿ ಟಾರ್ಗೆಟ್ ಮಾಡಲು ಕಾನೂನು ಬಾಹಿರವಾಗಿ ಅನುಮತಿ‌ ನೀಡಲಾಗಿತ್ತು ಎಂದು ಸರ್ಕಾರ ಪ್ರತಿಪಾದಿಸಿದೆ. ಆದರೆ ಈ‌ ವಿಚಾರವನ್ನು ಮುಂದಿಟ್ಟುಕೊಂಡು ಸದನದಲ್ಲಿ ಹೋರಾಟ ನಡೆಸಲು ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿದೆ. ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ಅನುಮತಿ ವಾಪಸ್ ಪಡೆದುಕೊಂಡಿದೆ ಎಂಬುದು ವಿರೋಧ ಪಕ್ಷಗಳ ಆರೋಪವಾಗಿದೆ. ಸದನದಲ್ಲಿ ಈ ವಿಚಾರ ಸದ್ದು ಗದ್ದಲಕ್ಕೆ ಕಾರಣವಾಗಬಹುದು.

ಅಸ್ತ್ರ – 3 ಬರ ನಿರ್ವಹಣೆ ವೈಫಲ್ಯ
ರಾಜ್ಯದಲ್ಲಿ 233 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಆದರೆ ಬರ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಕುಡಿಯುವ ನೀರಿನ ಕೊರತೆ ಇದೆ. ಬೆಳೆ ನಷ್ಟ ರೈತರಿಗೆ ಪರಿಹಾರ ಸಿಕ್ಕಿಲ್ಲ. ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದ ರೈತರಿಗೆ ತೊಂದರೆಯಾಗುತ್ತಿದೆ. ಬರ ಪರಿಹಾರ ನೀಡಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸದನದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ‌ ಹಾಗೂ ಜೆಡಿಎಸ್ ಜಂಟಿ ಹೋರಾಟ ನಡೆಸಲಿದೆ.

ಅಸ್ತ್ರ 4 – ಸ್ಪೀಕರ್ ಹುದ್ದೆ ಕುರಿತಾದ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ
ತೆಲಂಗಾಣ ಚುನಾವಣಾ ಪ್ರಚಾರದಲ್ಲಿ‌ ಅಲ್ಪಸಂಖ್ಯಾತ ಸಮುದಾಯದ ಸ್ಪೀಕರ್ ಮುಂದೆ ಬಿಜೆಪಿ ನಾಯಕರು ಕೈಮುಗಿದು ನಿಲ್ಲಬೇಕಾದ ಪರಿಸ್ಥಿತಿ ಇದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಕೊಟ್ಟ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ‌ ವಿಚಾರವನ್ನು ಮುಂದಿಟ್ಟುಕೊಂಡು ಜಮೀರ್ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿ ಸಿದ್ದವಾಗಿದೆ. ಸದನದಲ್ಲಿ ಇದು ಕೋಲಾಹಲಕ್ಕೆ ಕಾರಣವಾಗಬಹುದು.

ಅಸ್ತ್ರ 5- ಗ್ಯಾರಂಟಿ ವೈಫಲ್ಯ, ಅನುದಾನ ಕೊರತೆ
ಇನ್ನು ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಜಾರಿಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಸದನದಲ್ಲಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ. ರಾಜ್ಯದ ಹಲವು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ಸಿಕ್ಕಿಲ್ಲ. ಇದು ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬುದು ವಿರೋಧ ಪಕ್ಷಗಳ ಆರೋಪವಾಗಿದೆ. ಜೊತೆಗೆ ಗ್ಯಾರಂಟಿ ಹೆಸರಿನಲ್ಲಿ ಶಾಸಕರಿಗೆ ಅನುದಾನ ಸಿಗುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳು ಹಿನ್ನಡೆಯಾಗಿದೆ ಎಂದು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ.

ಬಿಜೆಪಿ – ಜೆಡಿಎಸ್ ಜಂಟಿ ಹೋರಾಟ
ಇನ್ನು ಈ ಬಾರಿಯ ಅಧಿವೇಶನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಹೋರಾಟ ನಡೆಯಲಿದೆ. ಲೋಕಸಭಾ ಚುನಾವಣಾ ದೃಷ್ಟಿಯಿಂದ ಎರಡು ಪಕ್ಷಗಳ ನಡುವೆ ಮೈತ್ರಿಯಾಗಿದೆ. ಸದನದಲ್ಲೂ ಎರಡು ಪಕ್ಷಗಳು ಒಗ್ಗಟ್ಟಾಗಿ ಹೋರಾಟ ನಡೆಸಲಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೂ ಇದು ಸವಾಲಾಗಿದೆ.

Leave a Reply

Your email address will not be published. Required fields are marked *

error: Content is protected !!