ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್‌ಗೆ ಬಜೆಟ್‌ನಲ್ಲಿ ಅನುದಾನ : ಸಿಎಂ ಭರವಸೆ

Budget grant for free bus pass for rural journalists: CM promises

ಗ್ರಾಮೀಣ ಪತ್ರಕರ್ತ

ವಿಜಯಪುರ: ತಾವು ಮಂಡಿಸಲಿರುವ ಬಜೆಟ್‌ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯಕ್ಕೆ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ನಗರದ ಕಂದಗಲ್ ಹನುಮಂತ ರಾಯ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕಾರಣಿಗಳ‌ ನಡುವೆ ಅವಿನಾಭಾವ ಸಂಬಂಧ ಇದೆ.‌ ಅದು  ಗಂಡ, ಹೆಂಡತಿ ಸಂಬಂಧ ಇದ್ದಂತೆ ಎಂದು ವ್ಯಾಖ್ಯಾನಿಸಿದ ಬೊಮ್ಮಾಯಿ, ಪತ್ರಕರ್ತರ ಸಮ್ಮೇಳನ ಆಧುನಿಕ ಚಿಂತಕರ ಸಮ್ಮೇಳನ ಇದ್ದಂತೆ ಎಂದರು.
ಪತ್ರಕರ್ತರ ಬೇಡಿಕೆಗಳಿಗೆ ಸ್ಪಂದಿಸಿದ ಸಿಎಂ, ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಳ ಮಾಡಲು ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುವುದು. ಪತ್ರಿಕೆಗಳಿಗೆ ನೀಡುವ ಸರ್ಕಾರಿ ಜಾಹೀರಾತುಗಳ ದರ ಪರಿಷ್ಕರಣೆ ಮಾಡಲಾಗುವುದು. ಪತ್ರಕರ್ತರನ್ನು ಯಶಸ್ವಿನಿ ಯೋಜನೆ ಸೇರ್ಪಡೆಗೂ ಅಗತ್ಯ ಕ್ರಮಕೈಗೊಳಲಾಗುವುದು. ಜತೆಗೆ, ನಗರ, ಪಟ್ಟಣಗಳ ವಸತಿ ಯೋಜನೆಯಲ್ಲಿ ಪತ್ರಕರ್ತರಿಗೆ ನಿವೇಶನ ಮೀಸಲಿಡಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.


ವಿಧಾನ ಪರಿಷತ್‌ಗೆ ಹಿರಿಯ ಪತ್ರಕರ್ತರ ನೇಮಕ ಮಾಡಬೇಕು ಎಂಬ ಸಂಘದ ಬೇಡಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ವಿಧಾನ ಪರಿಷತ್‌ಗೆ ನೇಮಕವಾಗಲು ನಮ್ಮಲ್ಲೇ ಪೈಪೋಟಿ ಬಹಳ ಇದೆ. ಆದರೂ, ಅವಕಾಶ ನೀಡಲು ಯೋಚಿಸಲಾಗುವುದು ಎಂದರು.
ಪತ್ರಕರ್ತರ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವರ್ಷಕ್ಕೊಂದು, ತಿಂಗಳಿಗೊಂದು ಪತ್ರಿಕೆ ತರುವವರು ಪತ್ರಕರ್ತರು ಎಂದು ಬೀಗುತ್ತಿದ್ದಾರೆ. ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನೈಜ ಪತ್ರಕರ್ತರು ಮರೆಯಾಗುವ ಸ್ಥಿತಿ ಎದುರಾಗಿದೆ ಎಂದು ವಿಷಾದಿಸಿದರು.
ಆಧುನಿಕ ಬದಲಾವಣೆಗೆ ಪತ್ರಕರ್ತರು ಹೊಂದಿಕೊಳ್ಳಬೇಕಿದೆ ಎಂದರು. ಸಂಘದ ಪದಾಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರಲ್ಲದೆ, ಯೂಟ್ಯೂಬ್ ಚಾನಲ್‌ಗಳ ಹಾವಳಿಯಿಂದ ನೈಜ ಪತ್ರಕರ್ತರು ಕಳೆದುಹೋಗುವ ಸಂದರ್ಭ ಒದಗಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಹಿರಿಯ ಪತ್ರಕರ್ತ ರವೀಂದ್ರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವ ಗೋವಿಂದ ಕಾರಜೋಳ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಸಚಿವ ಸಿ.ಸಿ.ಪಾಟೀಲ ಅವರು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎ.‌ಎಸ್.ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡ ಪಾಟೀಲ, ಅಪ್ಪು ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ, ಪತ್ರಕರ್ತರ ಸಂಘದ ರಾಜ್ಯ ಘಟಕದ  ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೋಶ, ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್‌ ಶಿಂಧೆ ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!